ತಂತ್ರಜ್ಞಾನ

ಗಗನಯಾನಕ್ಕೆ ಮೂವರು ಭಾರತೀಯರು; ಕೇಂದ್ರ ಸರ್ಕಾರ ಒಪ್ಪಿಗೆ

ನವದೆಹಲಿ: ಭಾರತೀಯರ ಬಹುದಿನಗಳ ಗಗನಯಾನ ಕನಸು ನನಸಾಗುವ ದಿನಗಳು ಹತ್ತಿರಕ್ಕೆ ಬಂದಿದ್ದು, ಕೇಂದ್ರ ಸರ್ಕಾರ ಮೂವರನ್ನು ಗಗನಯಾತ್ರೆಗೆ ಕಳುಹಿಸಲು ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 10 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಗಗನಯಾತ್ರೆಗೆ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. 2022ರ ಒಳಗಾಗಿ ಭಾರತದ ಮೂವರನ್ನು ಗಗನಯಾತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಈ ಯಾತ್ರಿಗಳು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಈ ಯೋಜನೆಗೆ ಯಶಸ್ಸು ಸಿಕ್ಕಿದ್ದೇ ಆದರೆ, ಭಾರತ ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸಿದ ನಾಲ್ಕನೇ ದೇಶವಾಗಿ ಗುರುತಿಸಿಕೊಳ್ಳಲಿದೆ.

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಎರಡು ಮಾನವ ರಹಿತ ವಿಮಾನಗಳು ಮತ್ತು ಒಂದು ಮಾನವ ಸಹಿತ ವಿಮಾನಗಳು ಈ ಯೋಜನೆಯನ್ವಯ ನಭಕ್ಕೆ ನೆಗೆಯಲಿವೆ. 10 ಸಾವಿರ ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿ, ಮೂಲ ಸೌಕರ್ಯ ನಿರ್ವಹಣೆ ಮತ್ತು ಇತರ ಅಗತ್ಯಕ್ಕೆ ಬಳಕೆ ಮಾಡಲಾಗುತ್ತದೆ. ಮಾನವ ಸಹಿತ ಗಗನ ಯಾನಕ್ಕೆ ಇಸ್ರೋ ಜಿಎಸ್‌ಎಲ್‌ವಿ ಮಾರ್ಕ್‌-3 ಬಾಹ್ಯಾಕಾಶ ನೌಕೆ ಬಳಕೆ ಮಾಡಲಿದೆ.

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದಲೇ ಈ ರಾಕೆಟ್‌ ಅಂತರಿಕ್ಷಕ್ಕೆ ಚಿಮ್ಮಲಿದೆ. ಇಸ್ರೋ ಪ್ರಕಾರ ಇನ್ನು 40 ತಿಂಗಳಲ್ಲಿ ಮೊದಲ ಯೋಜನೆ ಜಾರಿಯಾಗಲಿದೆ. ಮೊದಲಿಗೆ ಮಾನವ ರಹಿತ ವಿಮಾನಗಳನ್ನು ಕಳುಹಿಸಿ ಪರೀಕ್ಷೆ ಮಾಡಿ, ಕೊನೆಗೆ ಮಾನವ ಸಹಿತ ವಿಮಾನವನ್ನು ಅಂತರಿಕ್ಷಕ್ಕೆ ಕಳುಹಿಸಲಾಗುತ್ತದೆ. ಅಂತರಿಕ್ಷಕ್ಕೆ ತೆರಳುವ ಯಾತ್ರಿಗಳನ್ನು ವ್ಯೋಮಯಾತ್ರಿಗಳು ಎಂದು ಕರೆಯಲು ಭಾರತ ಚಿಂತನೆ ನಡೆಸಿದೆ. 2022ರ ಗಡುವಿನ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಡಾ. ಕೆ. ಸಿವನ್‌, ಇದು ಅಲ್ಪ ಕಾಲಾವಧಿಯಾಗಿದ್ದು, ಆದರೂ ಇಸ್ರೋ ಸಾಧಿಸಿಯೇ ತೀರುತ್ತದೆಎಂದು ಹೇಳಿದ್ದಾರೆ. ಈಗಾಗಲೇ ಈ ಯೋಜನೆಗೆ ರಷ್ಯಾ ಸಂಪೂರ್ಣ ಸಹಕಾರ ನೀಡುವುದಾಗಿ ಭಾರತದ ಜತೆ ಒಪ್ಪಂದ ಮಾಡಿಕೊಂಡಿದೆ.

 

About the author

ಕನ್ನಡ ಟುಡೆ

Leave a Comment