ರಾಜ್ಯ ಸುದ್ದಿ

ಗಾಂಜಾ ಬಗ್ಗೆ ಭಾಷಣ: ಸ್ವಾಮಿ ನಿತ್ಯಾನಂದಗೆ ಸಿಸಿಬಿ ಅಧಿಕಾರಿಗಳಿಂದ ನೊಟೀಸ್

ಬೆಂಗಳೂರು: ಗಾಂಜಾ ಸೇವನೆ ಬಗ್ಗೆ ನೀಡಿದ್ದ ಹೇಳಿಕೆ ವೈರಲ್ ಆದ ನಂತರ ಸ್ವಘೋಷಿತ ದೇವಮಾನವ ನಿತ್ಯಾನಂದಗೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.ಗಾಂಜಾದಿಂದ ಧ್ಯಾನಕ್ಕೆ ಸಹಾಯವಾಗುತ್ತದೆ ಎಂದು ನಿತ್ಯಾನಂದ ಸ್ವಾಮಿ ಭಕ್ತರಿಗೆ ಹೇಳುತ್ತಿರುವ ಬೋಧನೆ ವೈರಲ್ ಆಗಿದ್ದು ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.ನಿತ್ಯಾನಂದ ಆಶ್ರಮ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವುದರಿಂದ ಬಿಡದಿ ಠಾಣೆಯ ಪೊಲೀಸರು ಕ್ರಮ ಕೈಗೊಳ್ಳುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಡದಿ ಪೊಲೀಸರು ವರದಿ ಸಲ್ಲಿಸಿದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಮಧ್ಯೆ ಬಿಡದಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಚಾತುರ್ಮಾಸ ಪ್ರಯುಕ್ತ ನಿತ್ಯಾನಂದ ಸ್ವಾಮಿ ನಾಲ್ಕು ತಿಂಗಳು ನಗರದಿಂದ ಹೊರಗಿರುತ್ತಾರೆ.

ಇತ್ತೀಚೆಗೆ ಸಿಐಡಿ ಅಧಿಕಾರಿಯೊಬ್ಬರು ಆಶ್ರಮಕ್ಕೆ ಬಂದು ಕೇಸಿನ ಸಂಬಂಧ ವಿಚಾರಣೆ ನಡೆಸಲು ಪ್ರಯತ್ನಿಸಿದ್ದರು, ಆದರೆ ನಿತ್ಯಾನಂದ ಸ್ವಾಮಿ ಸಿಗಲಿಲ್ಲ. ನಿತ್ಯಾನಂದ ಮಾಡಿರುವ ಭಾಷಣದ ಬಗ್ಗೆ ನಮಗೇನು ಗೊತ್ತಿಲ್ಲ. ಸಿಸಿಬಿಯಿಂದ ನಮಗೆ ಯಾವುದೇ ಮಾಹಿತಿ ಹಾಗೂ ಸೂಚನೆಗಳು ಬಂದಿಲ್ಲ ಎಂದರು.ಅಭ್ಯಾಸಗಳು ಮನುಷ್ಯನಲ್ಲಿ ಹೇಗೆ ಹುಟ್ಟಿಕೊಳ್ಳುತ್ತವೆ ಎಂಬ ಬಗ್ಗೆ ನಿತ್ಯಾನಂದ ಸ್ವಾಮಿ ಮಾಡಿದ್ದ ಭಾಷಣದಲ್ಲಿ, ಆಲ್ಕೋಹಾಲ್ ಮಾತ್ರವೇ ಕೆಟ್ಟ ಚಟವಾಗಿ ಪರಿಣಮಿಸುತ್ತದೆ, ಗಾಂಜಾ ಗಿಡಮೂಲಿಕೆಯಿಂದ ತಯಾರಿಸುವುದರಿಂದ ಅದು ಕೆಟ್ಟ ಚಟವಲ್ಲ. ನನ್ನ ಜೀವನದಲ್ಲಿ ಗಾಂಜಾ ತಿಂದು ಅದು ಕೆಟ್ಟ ಅಭ್ಯಾಸವಾಗಿ ಮಾರ್ಪಟ್ಟವರನ್ನು ನಾನೆಂದಿಗೂ ನೋಡಿಲ್ಲ. ಹಾಗೆಂದು ನಾನು ಗಾಂಜಾ ಸೇವಿಸಿ ಎಂದು ಹೇಳುತ್ತಿಲ್ಲ. ನಾನು ಎಂದಿಗೂ ಅದನ್ನು ಬಳಸಿಲ್ಲ, ನೀವು ಕೂಡ ಬಳಸಿ ಎಂದು ಹೇಳುವುದಿಲ್ಲ ಎಂದಿದ್ದಾರೆ.ಕಳೆದ ವರ್ಷ ತಮ್ಮ ಹಾಡೊಂದರಲ್ಲಿ ಗಾಂಜಾ ಸೇವನೆ ಬಗ್ಗೆ ಪ್ರಚಾರ ಮಾಡಿದ್ದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಅಧಿಕಾರಿಗಳು ನೊಟೀಸ್ ಜಾರಿ ಮಾಡಿ ನಂತರ ಅವರು ವಿಚಾರಣೆಗೆ ಹಾಜರಾಗಿ ಕ್ಷಮೆ ಕೇಳಿದ್ದರು.

About the author

ಕನ್ನಡ ಟುಡೆ

Leave a Comment