ರಾಜ್ಯ ಸುದ್ದಿ

ಗೌಡಯ್ಯ ಮನೆಯಲ್ಲಿ ಚಿನ್ನದ ಗಣಿ: ಎಸಿಬಿ ದಾಳಿ ವೇಳೆ 18 ಕೆಜಿ ಚಿನ್ನ ಪತ್ತೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿರುವ ಸರ್ಕಾರಿ ಅಧಿಕಾರಿ ಗೌಡಯ್ಯ ಅವರ ಮನೆಯಲ್ಲಿ ಬಗೆದಷ್ಟೂ ಭಾರೀ ಸಂಪತ್ತು ಪತ್ತೆಯಾಗುತ್ತಿದ್ದು, ಸುಮಾರು 18 ಕೆಜಿಗೂ ಹೆಚ್ಚು ಚಿನ್ನ ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ. ಬಿಡಿಎ ಎಂಜಿನಿಯರ್ ಅಧಿಕಾರಿ-5 ಎನ್.ಜಿ. ಗೌಡಯ್ಯ ಅವರ ಅಕ್ರಮ ಬಯಲಾಗುತ್ತಿದ್ದಂತೆಯೇ ಎಸಿಬಿ ಕಚೇರಿಗೆ 500ಕ್ಕೂ ಹೆಚ್ಚು ಕರೆಗಳು ಹಾಗೂ ಸುಮಾರು 70 ಇಮೇಲ್ ಗಳು ಬಂದಿವೆ. ನಿರಂತರ 20 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಎಸಿಬಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಬಸವೇಶ್ವರ ನಗರದಲ್ಲಿರುವ ಗೌಡಯ್ಯ ನಿವಾಸದ ಮೇಲೆ ದಿಢೀರ್ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳಿಗೆ ಮನೆಯಲ್ಲಿದ್ದ ಯಾವುದೇ ಲಾಕರ್’ಗಳ ಬೀಗದ ಕೈ ದೊರಕಿಲ್ಲ. ಬಳಿಕ ಗೌಡಯ್ಯ ಅವರು ತಮ್ಮ ಮಾವನ ಮನೆಯಲ್ಲಿ ಬೀಗದ ಕೈಗಳನ್ನು ಇಟ್ಟಿರುವುದು ತಿಳಿದುಬಂದಿದೆ. ಬಳಿಕ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಲಾಕರ್ ಗಳಲ್ಲಿ 17 ಕೆಜಿ ಚಿನ್ನವಿರುವುದು ಕಂಡು ಬಂದಿದೆ.
ಗೌಡಯ್ಯ ಜಯನಗರದಲ್ಲಿನ ತಮ್ಮ ಅತ್ತೆಯ ಮನೆಯಲ್ಲಿ ಚಿನ್ನಾಭರಣ ಮತ್ತು ಕೆಲವು ದಾಖಲೆಗಳನ್ನು ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಗೌಟ್ಟ ಅವರ ಅತ್ತೆಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡ ಬಳಿಕವಷ್ಟೇ ಈ ಬಗ್ಗೆ ಅವರಿಗೆ ಗೊತ್ತಾಗಿದೆ ಎಂದು ಹೇಳಲಾಗಿದೆ. ಆದರೂ ಗೌಡಯ್ಯ ಅತ್ತೆ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ಎಸಿಬಿ ಮೂಲಗಳು ಮಾಹಿತಿ ನೀಡಿವೆ.

About the author

ಕನ್ನಡ ಟುಡೆ

Leave a Comment