ಕ್ರೈಂ

ಗೌರಿ ಲಂಕೇಶ್ ಹಂತಕರ ಹಣೆಯ ಮೇಲೆ ತಿಲಕವಿರುವ ರೇಖಾಚಿತ್ರ ರಚನೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯ ತನಿಖೆಗಾಗಿ ರಚಿಸಿದ್ದ ವಿಶೇಷ ತಂಡ ಶನಿವಾರ ಹಣೆಯ ಮೇಲೆ ತಿಲಕವಿರುವ ಹಂತಕರ ರೇಖಾಚಿತ್ರ ಬಿಡುಗಡೆ ಮಾಡಿದೆ.

ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಸುದ್ದಿಗೋಷ್ಠಿ ನಡೆಸಿ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಕೃತ್ಯಕ್ಕೂ ಮುನ್ನ ಹಂತಕರು ಬೆಂಗಳೂರಿನಲ್ಲಿ ಒಂದು ವಾರ ಅಥವಾ ಒಂದು ತಿಂಗಳ ವರೆಗೂ ತಂಗಿರುವ ಸಾಧ್ಯತೆ ಇದೆ. ಅವರು ತಂಗಿದ್ದ ವೇಳೆ ಸಾರ್ವಜನಿಕರು ನೋಡಿರಬಹುದು. ಹೀಗಾಗಿ ನಾವು ಈಗ ಸಾರ್ವಜನಿಕರ ಸಹಾಯ ಕೇಳುತ್ತಿದ್ದೇವೆ. ಹಂತಕರನ್ನು ನೋಡಿದವರು SITಗೆ ಮಾಹಿತಿ ನೀಡಿ ಸಹಕರಿಸಿ ಎಂದು ಸಿಂಗ್ ಕೋರಿಕೊಂಡರು.

ಮೂವರು ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಇಬ್ಬರು ಹಂತಕರ ಚಿತ್ರವಿದ್ದು, ಒಬ್ಬ ಆರೋಪಿಯ ಎರಡು ರೀತಿಯ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಹಂತಕರ ಪತ್ತೆಗೆ ಶ್ರಮಿಸುತ್ತಿರುವುದಾಗಿ ಹೇಳಿದ ಸಿಂಗ್​ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಎಲ್ಲ ರೀತಿಯಿಂದ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಹಂತಕರು ಎಲ್ಲಿಯವರು ಅನ್ನುವುದರ ಬಗ್ಗೆ ಯಾವುದೇ ಮಾಹಿತಿ SITಬಳಿ ಇಲ್ಲ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಆಧರಿಸಿ ರೇಖಾಚಿತ್ರ ರಚನೆ ಮಾಡಲಾಗಿದೆ. ಗೌರಿ ಲಂಕೇಶ್ ಅವರ​ ಮನೆ ಬಳಿ ಇರುವ ಸಿಸಿಟಿವಿ ಮೂಲಕ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ರೇಖಾಚಿತ್ರದಲ್ಲಿ ವ್ಯಕ್ತಿಯ ಹಣೆ ಮೇಲೆ ತಿಲಕ ಇದೆ ಅನ್ನುವ ಕಾರಣಕ್ಕೆ ಇಂಥವರೇ ಹಂತಕರು ಎಂದು ಹೇಳಲು ಸಾಧ್ಯವಿಲ್ಲ. ತನಿಖೆಯ ದಾರಿ ತಪ್ಪಿಸಲು ಕೂಡ ಹಂತಕರು ತಿಲಿಕ ಹಚ್ಚಿರುವ ಸಾಧ್ಯತೆ ಇದೆ ಎಂದು ಸಿಂಗ್​ ಹೇಳಿದರು.

ಹಂತಕರು ಬೈಕ್ ನಲ್ಲಿ ಬಂದಿದದ್ದರು. ಈ ಬೈಕ್ ಮಾಹಿತಿ ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ. ಹತ್ಯೆಗೆ 7.65 ಎಂ ಎಂ ಕಂಟ್ರಿಮೇಡ್ ಪಿಸ್ತೂಲ್ ಬಳಕೆ ಮಾಡಲಾಗಿದೆ. ಹಂತಕರು 25ರಿಂದ 35 ವರ್ಷ ಮಧ್ಯದವರು. ಈಗಾಗಲೇ 200ರಿಂದ 250 ಜನರನ್ನು ಪ್ರಕರಣ ಸಂಬಂಧ ವಿಚಾರಣೆ ತನಿಖಾ ತಂಡ ನಡೆಸಿದೆ. ನಾವು ಯಾವುದೇ ನಿರ್ದಿಷ್ಟ ಸಂಸ್ಥೆಯನ್ನು ಟಾರ್ಗೆಟ್ ಮಾಡಿ ತನಿಖೆ ನಡೆಸುತ್ತಿಲ್ಲ. ಕೆಲವು ಹಿಂದೂ ಸಂಘಟನೆಗಳ ಹೆಸರು ಕೇಳಿ ಬಂದಿದ್ದೇ ಮಾಧ್ಯಮಗಳ ಮೂಲಕ ಎಂದ ಅವರು ನಾವು ತನಿಖೆಯಲ್ಲಿ ಇಷ್ಟು ಪ್ರಗತಿ ಸಾಧಿಸಲು ಸಾರ್ವಜನಿಕರ ನೆರವು ಬಹು ಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment