ರಾಷ್ಟ್ರ

ಗ್ರಾಚ್ಯುಯಿಟಿ (ತಿದ್ದುಪಡಿ) ಮಸೂದೆ- 2017ಕ್ಕೆ ಲೋಕಸಭೆ ಅನುಮೋದನೆ .

ಗ್ರಾಚ್ಯುಯಿಟಿ (ತಿದ್ದುಪಡಿ) ಮಸೂದೆ- 2017ಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ಇದು ಸರ್ಕಾರಕ್ಕೆ ಹೆರಿಗೆ ರಜೆಯನ್ನು ನಿಗದಿಪಡಿಸುವ ಮತ್ತು ತೆರಿಗೆ ಮುಕ್ತ ಗ್ರಾಚ್ಯುಯಿಟಿ ಮೊತ್ತವನ್ನು ಆಡಳಿತಾತ್ಮಕ ಆದೇಶದೊಂದಿಗೆ ಒದಗಿಸುವ ಅಧಿಕಾರವನ್ನು ನೀಡುತ್ತದೆ. ಈ ಮಸೂದೆಯು ಹಾಲಿ ಜಾರಿಯಲ್ಲಿರುವ ಗ್ರಾಚ್ಯುಯಿಟಿ ಪಾವತಿ ಕಾಯ್ದೆ- 1972ಕ್ಕೆ ತಿದ್ದುಪಡಿ ತರಲಿದೆ.

*ಗ್ರಾಚ್ಯುಯಿಟಿ ಪಾವತಿ ಕಾಯ್ದೆ– 1972 

ಗ್ರಾಚ್ಯುಯಿಟಿ ಪಾವತಿ ಕಾಯ್ದೆ- 1972, ಯಾವುದೇ ಸಂಘ ಸಂಸ್ಥೆ, ಫ್ಯಾಕ್ಟರಿ, ಗಣಿಗಾರಿಕೆ, ತೈಲಕ್ಷೇತ್ರ, ಪ್ಲಾಂಟೇಷನ್, ಬಂದರು, ರೈಲ್ವೆ, ಕಂಪನಿ ಅಥವಾ ಮಳಿಗೆಗಳು 10 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿದ್ದರೆ, ಅಂಥ ಸಿಬ್ಬಂದಿಗೆ ಗ್ರಾಚ್ಯುಯಿಟಿ ಪಾವತಿಗೆ ಇದು ಅವಕಾಶ ಮಾಡಿಕೊಡುತ್ತದೆ. ಈ ಕಾಯ್ದೆಯಡಿ, ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಉದ್ಯೋಗದಿಂದ ಕಿತ್ತುಹಾಕುವ ವೇಳೆಯಲ್ಲಿ ಗ್ರಾಚ್ಯುಯಿಟಿ ನೀಡುವುದು ಕಡ್ಡಾಯ.

*ಮಸೂದೆಯ ಪ್ರಮುಖ ಅಂಶಗಳು 

ನೂತನ ಮಸೂದೆಯು ಕೇಂದ್ರ ಸರ್ಕಾರಕ್ಕೆ ಹೆರಿಗೆ ರಜೆಯನ್ನು ಅಧಿಸೂಚನೆ ಮೂಲಕ ನಿಗದಿಪಡಿಸಲು ಅವಕಾಶ ಮಾಡಿಕೊಡುತ್ತದೆ. ಇಂಥ ಹೆರಿಗೆ ರಜೆ ಪಡೆಯುವ ಉದ್ಯೋಗಿಯ ಸೇವೆ ಮುಂದುವರಿಯಲು ಮತ್ತು ಈ ಅವಧಿಗೆ ಕೂಡಾ ಗ್ರಾಚ್ಯುಯಿಟಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದೆ.

ಈ ಕಾಯ್ದೆಯ ಅನ್ವಯ ಸೇವೆಯನ್ನು ಮುಂದುವರಿಸಲು ಲೆಕ್ಕಹಾಕಲಾಗುವ ಗರಿಷ್ಠ ಹೆರಿಗೆ ರಜೆಯು, ಹೆರಿಗೆ ಸೌಲಭ್ಯಗಳ ಕಾಯ್ದೆ- 1961ರ ಅನ್ವಯ ಲೆಕ್ಕಹಾಕಲಾದ ಹೆರಿಗೆ ರಜೆಯ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಹೆರಿಗೆ ಸೌಲಭ್ಯಗಳ ಕಾಯ್ದೆ- 1961ರಲ್ಲಿ ಉಲ್ಲೇಖವಿರುವ 12 ವಾರಗಳ ಎಂಬ ಅಂಶವನ್ನು ಈ ಮಸೂದೆ ಕಿತ್ತುಹಾಕಲಿದ್ದು, ಗರಿಷ್ಠ ಹೆರಿಗೆ ರಜೆಯ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಕಾಯ್ದೆಯ ಅನ್ವಯ, ಗರಿಷ್ಠ ಹೆರಿಗೆ ರಜೆ 12 ವರ್ಷ ಇದ್ದುದನ್ನು ಹೆರಿಗೆ ಸೌಲಭ್ಯಗಳ (ತಿದ್ದುಪಡಿ) ಕಾಯ್ದೆ- 2017 ಜಾರಿಗೆ ತಂದು 26 ವಾರಗಳಿಗೆ ಪರಿಷ್ಕರಿಸಲಾಗಿದೆ.

ಈ ಮಸೂದೆಯು ಹಾಲಿ ಇರುವ 10 ಲಕ್ಷ ರೂಪಾಯಿ ಗರಿಷ್ಠ ಗ್ರಾಚ್ಯುಯಿಟಿ ಮಿತಿಯನ್ನು ಕೂಡಾ ರದ್ದುಪಡಿಸಿದೆ. ಈ ಗರಿಷ್ಠ ಮಿತಿಯನ್ನು ಸರ್ಕಾರದ ಅಧಿಸೂಚನೆಗೆ ಅನುಗುಣವಾಗಿ ನಿಗದಿಪಡಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

About the author

Pradeep Kumar T R

Leave a Comment