ರಾಷ್ಟ್ರ ಸುದ್ದಿ

ಚಳಿಗಾಲ ಅಧಿವೇಶನ: ಪಕ್ಷಗಳಿಗೆ ಬಿಟ್ಟು, ಜನಹಿತಕ್ಕಾಗಿ ವಿಪಕ್ಷಗಳು ಸಮಯ ವ್ಯಯಿಸಲಿವೆ ಎಂಬ ವಿಶ್ವಾಸ, ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ತಮ್ಮ ತಮ್ಮ ಪಕ್ಷಗಳಿಗಾಗಿ ಅಲ್ಲದೆ, ಜನರ ಕಲ್ಯಾಣಕ್ಕಾಗಿ ವಿರೋಧ ಪಕ್ಷಗಳ ನಾಯಕರು ಸಮಯ ವ್ಯಯಿಸಲಿದ್ದಾರೆಂಬ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ಚಳಿಗಾಲ ಅಧಿವೇಶನ ಇಂದಿನಿಂದ ಆರಂಭವಾಗಿರುವ ಹಿನ್ನಲೆಯಲ್ಲಿ ಸಂಸತ್ತು ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿಯವರು, ಈ ಅಧಿವೇಶನ ಅತ್ಯಂತ ಮುಖ್ಯವಾದದ್ದು. ಸಾರ್ವಜನಿಕರ ಮುಖ್ಯ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ. ಈ ಭಾವನೆಗಳಿಗೆ ಸಂಸತ್ತಿನ ಪ್ರತೀಯೊಬ್ಬ ಸದಸ್ಯನೂ ಬೆಲೆ ಕೊಡುತ್ತಾನೆಂಬ ನಂಬಿಕೆ ನನಗಿದೆ. ಪ್ರತೀ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ನಾವು ಶ್ರಮಿಸುತ್ತೇವೆಂದು ಹೇಳಿದ್ದಾರೆ. ಸಂಸತ್ತಿನ ಚಳಿಗಾಲ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದ್ದು, ಅಧಿವೇಶನದಲ್ಲಿ ನೆನೆಗುದಿಗೆ ಬಿದ್ದಿರುವ ತ್ರಿವಳಿ ತಲಾಖ್ ಸೇರಿದಂತೆ ಇನ್ನಿತರೆ ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಸಜ್ಜಾಗಿದೆ.
ಅಧಿವೇಶನದಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ, ರಫೇಲ್ ಯುದ್ಧ ವಿಮಾನ ಖರೀದಿ ಹಗರಣ, ಸಿಬಿಐ ಉನ್ನತಾಧಿಕಾರಿಗಳ ಕಚ್ಚಾಟ, ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ವಿರುದ್ದ ಕೇಳಿಬಂದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಈಗಾಗಲೇ ಸಿದ್ಧಗೊಂಡಿವೆ.

About the author

ಕನ್ನಡ ಟುಡೆ

Leave a Comment