ರಾಜ್ಯ ಸುದ್ದಿ

ಚಿತ್ರನಟಿ ಮನೆ ಮಹಡಿಯಿಂದ ಬಿದ್ದ ಫೋಟೋಗ್ರಾಫರ್‌ ಸಾವು

ಬೆಂಗಳೂರು: ದುನಿಯಾ ಸಿನಿಮಾ ಖ್ಯಾತಿಯ ನಟಿ ರಶ್ಮಿ ಮನೆಯ ಮೂರನೇ ಮಹಡಿಯಿಂದ ಬಿದ್ದು ಫೋಟೋಗ್ರಾಫರ್‌ವೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮಾಗಡಿ ರಸ್ತೆ ಭಾರತನಗರ 2ನೇ ಹಂತದ ನಿವಾಸಿ ಪ್ರತೀಕ್‌(25) ಮೃತರು. ಅನ್ನಪೂಣೇಶ್ವರಿ ನಗರದಲ್ಲಿರುವ ನಟಿ ರಶ್ಮಿ ಅವರ ಮನೆಯ ಮಹಡಿ ಮೇಲಿಂದ ಭಾನುವಾರ ರಾತ್ರಿ ಪ್ರತೀಕ್‌ ಬಿದ್ದಿದ್ದು, ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ರಶ್ಮಿ ಕುಟುಂಬದವರೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರಿಗೆ ಮಾಹಿತಿ ನೀಡಿದ ಬಳಿಕವೇ ಮೃತನ ಪಾಲಕರಿಗೆ ವಿಷಯ ತಿಳಿದದ್ದು. ಅಲ್ಲದೇ ಸಾವಿಗೆ ಕಾರಣ ಏನು ಎಂಬುದನ್ನು ಸರಿಯಾಗಿ ತಿಳಿಸದ ಕಾರಣ ರಶ್ಮಿ ಕುಟುಂಬದವರ ವಿರುದ್ಧವೇ ಮೃತನ ತಂದೆ ಕೃಪಾನಿಧಿ ದೂರು ನೀಡಿದ್ದಾರೆ. ಹೀಗಾಗಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅನ್ನಪೂರ್ಣೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ.

ದುನಿಯಾ ಸಿನಿಮಾದಿಂದಲೂ ರಶ್ಮಿ ಕುಟುಂಬಕ್ಕೆ ಪ್ರತೀಕ್‌ ಪರಿಚಯವಿದ್ದರು. ನಟಿಯ ಕುಟುಂಬದ ಹಲವು ಕಾರ್ಯಕ್ರಮಗಳ ಫೋಟೋವನ್ನು ಪ್ರತೀಕ್‌ ತೆಗೆದಿದ್ದರು. ಹೀಗಾಗಿ, ರಶ್ಮಿಯ ಸಹೋದರ ಅರುಣ್‌ಕುಮಾರ್‌ ಕೂಡಾ ಪ್ರತೀಕ್‌ಗೆ ಸ್ನೇಹಿತರಾಗಿದ್ದರು. ಭಾನುವಾರ ರಾತ್ರಿ ರಶ್ಮಿ ಮನೆಗೆ ಬಂದಿದ್ದ ಪ್ರತೀಕ್‌, ಅರುಣ್‌ ಜತೆ 3ನೇ ಮಹಡಿ ಮೇಲೆ ಮದ್ಯದ ಪಾರ್ಟಿ ಮಾಡಿದ್ದಾರೆ. ರಾತ್ರಿ 11.15ರ ಸುಮಾರಿಗೆ ಅರುಣ್‌, ಕೆಳಗೆ ಬಂದು ಊಟ ತೆಗೆದುಕೊಂಡು ಮೇಲೆ ಹೋದಾಗ ಪ್ರತೀಕ್‌ ಕೆಳಗೆ ಬಿದ್ದಿದ್ದ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಪ್ರತೀಕ್‌ ಮೃತಪಟ್ಟಿದ್ದಾನೆ. ಬೆಳಗ್ಗೆ 6.30ರ ಸುಮಾರಿಗೆ ಠಾಣೆಗೆ ತೆರಳಿದ ರಶ್ಮಿ ಕುಟುಂಬದವರು ದೂರು ನೀಡಿ ನಂತರ ಆತನ ಪಾಲಕರಿಗೆ ವಿಷಯ ಮುಟ್ಟಿಸಿದ್ದರು.

ಪಾಲಕರ ಆಕ್ಷೇಪ: ಸುದ್ದಿ ತಿಳಿದ ಪ್ರತೀಕ್‌ ಪಾಲಕರು, ರಾತ್ರಿ ನಡೆದಿರುವ ಘಟನೆ ಕುರಿತು ಕೂಡಲೇ ಮಾಹಿತಿ ನೀಡದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಪ್ರತೀಕ್‌ ಮೊಬೈಲ್‌ ಫೋನ್‌ ಲಾಕ್‌ ಆಗಿತ್ತು. ಹೀಗಾಗಿ, ಆತನ ಕುಟುಂಬ ಸದಸ್ಯರ ಮೊಬೈಲ್‌ ನಂಬರ್‌, ಮನೆ ವಿಳಾಸ ಪತ್ತೆಹಚ್ಚಲು ಆಗಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಊಟ ತರಲು ಹೋದಾಗ ಘಟನೆ ನಡೆದಿದೆ: ಊಟ ತರಲು ಮಹಡಿಯಿಂದ ಕೆಳಗೆ ಬಂದಾಗ ಘಟನೆ ನಡೆದಿದೆ. ಪ್ರತೀಕ್‌ ಹೇಗೆ ಕೆಳಗೆ ಬಿದ್ದ ಎಂಬುದು ಗೊತ್ತಿಲ್ಲ ಎಂದು ಅರುಣ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿನ ರಕ್ತದ ಕಲೆ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ತಜ್ಞರ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment