ರಾಷ್ಟ್ರ ಸುದ್ದಿ

ಚೀನಾಗೆ ಭದ್ರತಾ ಮಂಡಳಿಯ ಸ್ಥಾನ, ನೆಹರು ಕೊಟ್ಟ ಉಡುಗೊರೆ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

ನವದೆಹಲಿ: ಜಾಗತಿಕ ಉಗ್ರ ಪಟ್ಟಿಗೆ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ಸೇರ್ಪಡೆ ಚೀನಾ ತಡೆಯಾಗಿರುವ ಕುರಿತಂತೆ ಕಾಂಗ್ರೆಸ್ ಮಾಡಿರುವ ವಾಗ್ದಾಳಿಗೆ ಕೇಂದ್ರ ಸರ್ಕಾರ ಖಡಕ್ ತಿರುಗೇಟು ನೀಡಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಚೀನಾಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ಸ್ಥಾನವನ್ನು ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ನೀಡಿದ್ದ ಉಡುಗೊರೆ ಎಂದು ಹೇಳಿದ್ದಾರೆ. ಆ ಮೂಲಕ ಭಾರತದ ಇಂದಿನ ಸ್ಥಿತಿಗೆ ನೆಹರೂ ಅವರೇ ಕಾರಣ ಎಂದು ಕಾಂಗ್ರೆಸ್ ವಿರುದ್ಧ ರವಿಶಂಕರ್ ಪ್ರಸಾದ್ ನೇರ ವಾಗ್ದಾಳಿ ಮಾಡಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರವಿಶಂಕರ್ ಪ್ರಸಾದ್, ಉಗ್ರ ಮಸೂದ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ವಿಭಿನ್ನ ನಿಲುವು ತಾಳಿದಂತಿದೆ. ಈ ಹಿಂದೆ ಇದೇ ಉಗ್ರನ ಕುರಿತು ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕ ಪಟ್ಟಿ ಸೇರಿಸಲು ವಿಫಲವಾಗಿತ್ತು. ಉಗ್ರ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನ ವಿಫಲವಾಗಿದ್ದಕ್ಕೆ ರಾಹುಲ್ ಗಾಂಧಿ ಸಂಭ್ರಮ ಮಾಡುತ್ತಿರುವಂತಿದೆ. ಆದರೆ ಇದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಚೀನಾಗೆ ಭದ್ರತಾ ಮಂಡಳಿಯ ಸದಸ್ಯ ಸ್ಥಾನ ಸಿಕ್ಕಿತ್ತು. ನೆಹರು ಮಾಡಿದ್ದ ಒಂದು ತಪ್ಪಿನಿಂದಾಗಿ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಸ್ಥಾನ ಸಂಪಾದಿಸಿದೆ. ಅದು ನೆಹರೂ ಚೀನಾಗೆ ನೀಡಿದ್ದ ಉಡುಗೊರೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment