ದೇಶ ವಿದೇಶ

ಚೀನಾದಿಂದ ಒಫ್ಲೊಕ್ಸಾಸಿನ್ ಆಮದಿನ ಮೇಲೆ ಸುಂಕ(anti dumping duty) .

ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯು ಚೀನಾದಿಂದ ಆಮದಾಗುವ ಒಫ್ಲೋಕ್ಸಾಸಿನ್ ಮೇಲೆ ಸುರಿ ವಿರೋಧಿ ಸುಂಕ ವಿಧಿಸಲು ನಿರ್ಧರಿಸಿದೆ. ಒಫ್ಲೋಕ್ಸಾಸಿನ್ ಎನ್ನುವುದು ಒಂದು ಔಷಧೀಯ ಉತ್ಪನ್ನವಾಗಿದ್ದು, ಕೆಲ ಬಗೆಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಸುರಿವಿರೋಧಿ ಮತ್ತು ಸಂಬಂಧಿತ ಸುಂಕಗಳ ಮಹಾನಿರ್ದೇಶಕರ ಶಿಫಾರಸ್ಸಿನ ಮೇರೆಗೆ ಮುಂದಿನ ಮೂರು ವರ್ಷಗಳ ಅವಧಿಗೆ ಈ ಸುರಿವಿರೋಧಿ ಸುಂಕ ಜಾರಿಯಲ್ಲಿರುತ್ತದೆ. ಸುರಿವಿರೋಧಿ ಮತ್ತು ಸಂಬಂಧಿತ ಸುಂಕಗಳ ಮಹಾನಿರ್ದೇಶಕರ ಕಚೇರಿ ನಡೆಸಿದ ತನಿಖೆಯ ಪ್ರಕಾರ, ಚೀನಾದಿಂದ ಭಾರತಕ್ಕೆ ರಫ್ತಾಗುವ ಒಫ್ಲೊಕ್ಸಾಸಿನ್ ಮೌಲ್ಯವು ಸಾಮಾನ್ಯ ಬೆಲೆಗಿಂತ ಕಡಿಮೆ ಇದ್ದು, ಇದು ಸುರಿಯುವಿಕೆಯನ್ನು ಸೂಚಿಸುತ್ತದೆ. ಇದು ದೇಶೀಯ ಉದ್ಯಮಕ್ಕೆ ಮಾರಕವಾಗಿದೆ ಎಂದು ಶಿಫಾರಸ್ಸು ಮಾಡಿತ್ತು.

*ಒಫ್ಲೋಕ್ಸಾಸಿನ್ ಕುರಿತು

ಒಫ್ಲೋಕ್ಸಾಸಿನ್ ಎಂಬ ಔಷಧಿ ಒಂದು ಬಗೆಯ ಆಂಟಿಬಯಾಟಿಕ್ ಆಗಿದ್ದು, ಇದಕ್ಕೆ ಫ್ಲೊರೊಕ್ವಿನೊಲೊನಸ್ ಎಂದು ಹೆಸರು. ಇದನ್ನು ಹಲವು ಬಗೆಯ ಸೋಂಕುಗಳಾದ ಬ್ರಾಂಚೈಟೈಸ್, ನ್ಯೂಮೋನಿಯಾ, ಚರ್ಮದ ಸೋಂಕು, ಬ್ಲಾಡರ್, ಮೂತ್ರಕೋಶ, ಪುನರುತ್ಪತ್ತಿ ಅಂಗಗಳು, ವೃಷಣದ ಸೋಂಕಿನ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತದೆ. ಇದು ಸೋಂಕುಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವಲ್ಲಿ ಪರಿಣಾಮಕಾರಿ.

*ಏನಿದು ಸುರಿವಿರೋಧಿ ಸುಂಕ(anti dumping duty)……..? 

ಇದು ಸರ್ಕಾರ ವಿಧಿಸುವ ಒಂದು ಬಗೆಯ ಆಮದು ಸುಂಕವಾಗಿದ್ದು, ಸಾಮಾನ್ಯ ಮಾರುಕಟ್ಟೆ ಬೆಲೆ ಅಥವಾ ದೇಶೀಯ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಆಮದಾಗುವ ವಸ್ತುಗಳಿಗೆ ಇಂಥ ಸುಂಕ ವಿಧಿಸಲಾಗುತ್ತದೆ. ಇದು ದೇಶೀಯ ಉದ್ಯಮವನ್ನು ಸಂರಕ್ಷಿಸುವ ಮತ್ತು ಆಮದು ಮಾಡಿಕೊಳ್ಳುವುದನ್ನು ನಿಯಂತ್ರಿಸುವ ಕ್ರಮವಾಗಿದೆ. ವಿಶ್ವ ವ್ಯಾಪಾರ ಸಂಸ್ಥೆ ಒಪ್ಪಂದದಡಿ ಸದಸ್ಯದೇಶಗಳಾಗಿರುವ ಎಲ್ಲ ದೇಶಗಳಿಗೆ ಈ ಸುರಿವಿರೋಧಿ ಸುಂಕ ವಿಧಿಸುವ ಅವಕಾಶವಿದೆ. ಇದು ನ್ಯಾಯಸಮ್ಮತ ವ್ಯಾಪಾರ ಮತ್ತು ಸಮಾನ ವಾತಾವರಣವನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದು, ವಿದೇಶಿ ವ್ಯಾಪಾರಿಗಳ ಪೈಪೋಟಿಯೆದುರು ದೇಶೀಯ ವ್ಯಾಪಾರಿಗಳನ್ನು ಸಂರಕ್ಷಿಸುವ ಕ್ರಮವಾಗಿರುತ್ತದೆ. ಇದು ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗಲಿದ್ದು, ದೇಶದಿಂದ ದೇಶಕ್ಕೆ ಈ ಸುಂಕ ವ್ಯತ್ಯಯವಾಗುತ್ತದೆ. ಭಾರತದಲ್ಲಿ ವಾಣಿಜ್ಯ ಸಚಿವಾಲಯದ ಸುರಿವಿರೋಧಿ ಮತ್ತು ಸಂಬಂಧಿತ ಸುಂಕಗಳ ಮಹಾನಿರ್ದೇಶಕರ ಶಿಫಾರಸ್ಸಿನ ಮೇರೆಗೆ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಈ ಸುರಿವಿರೋಧಿ ಸುಂಕವನ್ನು ವಿಧಿಸುತ್ತದೆ.

About the author

Pradeep Kumar T R

Leave a Comment