ರಾಷ್ಟ್ರ ಸುದ್ದಿ

ಚುನಾವಣೆಗೆ ಮುನ್ನ ಕೊನೆಯ ಸಂಪುಟ ಸಭೆ: 30 ನಿರ್ಧಾರಗಳಿಗೆ ಅನುಮೋದನೆ

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಮುನ್ನ ಕೊನೆಯದು ಎನ್ನಬಹುದಾದ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ, 50 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಉತ್ತೇಜನ, ವಿದ್ಯುತ್ ಯೋಜನೆಗಳು, ಮಾಜಿ ಯೋಧರಿಗೆ ಆರೋಗ್ಯ ವಿಮಾ ಸೌಲಭ್ಯದ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

ಮಾದರಿ ನೀತಿ ಸಂಹಿತೆ ಜಾರಿಗೆ ಮುನ್ನವೇ, ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ 30 ನಿರ್ಧಾರಗಳಿಗೆ ಅನುಮೋದನೆ ನೀಡಿದೆ. ದಿಲ್ಲಿ ಮೆಟ್ರೋ ಮತ್ತು ಅನಧಿಕೃತ ಕಾಲನಿಗಳ ಕುರಿತ ನಿಯಮಗಳೂ ಇದರಲ್ಲಿ ಸೇರಿವೆ. ಹಲವು ರಾಜ್ಯಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳ ಯೋಜನೆಗಳೂ ಇವುಗಳಲ್ಲಿ ಸೇರಿದ್ದು, ಮುಂಬಯಿ ನಗರ ಸಾರಿಗೆ ವ್ಯವಸ್ಥೆಗೆ 191 ಹವಾನಿಯಂತ್ರಿತ ಬೋಗಿಗಳು ಸೇರ್ಪಡೆಯಾಗಲಿವೆ. ನೂತನ ಕೇಂದ್ರೀಯ ವಿದ್ಯಾಲಯಗಳು 2019-20ನೇ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದ್ದು, ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೇಂದ್ರೀಯ ವಿದ್ಯಾಲಯಗಳ ಸಂಖ್ಯೆ 1,252ಕ್ಕೆ ಏರಲಿವೆ. ಈ ಕೇಂದ್ರೀಯ ವಿದ್ಯಾಲಯಗಳ ಅಭಿವೃದ್ಧಿಗಾಗಿ ಐದು ವರ್ಷಗಳ ಅವಧಿಗೆ ಒಟ್ಟು 1,579 ಕೋಟಿ ರೂ.ಗಳನ್ನು ಸರಕಾರ ತೆಗೆದಿರಿಸಿದೆ. ಕೇಂದ್ರೀಯ ವಿದ್ಯಾಲಯ ವ್ಯವಸ್ಥೆಯಲ್ಲಿ ಒಟ್ಟು 12.5 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಮೂರು ಪ್ರಮುಖ ಕಾರಿಡಾರ್‌ಗಳನ್ನು ಒಳಗೊಂಡ ದಿಲ್ಲಿ ಮೆಟ್ರೋದ 4ನೇ ಹಂತವನ್ನು ಸಂಪುಟ ಸಮಿತಿ ಅನುಮೋದಿಸಿದೆ. ಇನ್ನೊಂದು ಪ್ರಮುಖ ನಿರ್ಧಾರದಲ್ಲಿ, 40,000 ಮಾಜಿ ಯೋಧರಿಗೆ ಎಕ್ಸ್‌-ಸರ್ವಿಸ್‌ಮನ್‌ ಕಾಂಟ್ರಿಬ್ಯೂಟರಿ ಹೆಲ್ತ್‌ ಸ್ಕೀಂ (ಇಸಿಎಚ್‌ಎಸ್‌) ಒದಗಿಸಲು ಅನುಮೋದನೆ ನೀಡಿದೆ. ಎರಡನೇ ಜಾಗತಿಕ ಯುದ್ಧದಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಾಜಿ ಯೋಧರು, ತುರ್ತು ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಶಾರ್ಟ್‌ ಸರ್ವಿಸ್ ಕಮಿಷನ್ ಅಧಿಕಾರಿಗಳು ಮತ್ತು ಅವಧಿಗೆ ಮೊದಲೇ ನಿವೃತ್ತರಾದವರಿಗೆ ಈ ಸೌಲಭ್ಯ ದೊರೆಯಲಿದೆ. ಉತ್ತರ ಪ್ರದೇಶದ ಖುರ್ಜಾ ಮತ್ತು ಬಿಹಾರದ ಬಕ್ಸಾರ್‌ನಲ್ಲಿ 1,320 ಮೆ.ವ್ಯಾ ಸಾಮರ್ಥ್ಯದ ಎರಡು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದ 624 ಮೆ.ವ್ಯಾ ಸಾಮರ್ಥ್ಯದ ಕಿರು ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್‌ಗೆ ಅನುಮತಿ ನೀಡಲಾಗಿದೆ. ಕಿಶ್ತ್‌ವಾರ್ ಜಿಲ್ಲೆಯ ಚಿನಾಬ್ ಕಣಿವೆಯಲ್ಲಿ ಈ ವಿದ್ಯುತ್ ಯೋಜನೆ ಜಾರಿಗೆ ಬರಲಿದೆ.

About the author

ಕನ್ನಡ ಟುಡೆ

Leave a Comment