ರಾಜ್ಯ ಸುದ್ದಿ

ಚುನಾವಣೆ ನೀತಿ ಸಂಹಿತೆ: 50 ಸಾವಿರಕ್ಕೂ ಅಧಿಕ ಹಣ ಕೊಂಡೊಯ್ಯವಂತಿಲ್ಲ

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ದಾಖಲೆ ಇಲ್ಲದೆ 50 ಸಾವಿರ ರೂ.ಗಿಂತ ಹೆಚ್ಚು ನಗದು ಮತ್ತು 10 ಸಾವಿರ ರೂ. ಮೀರಿದ ಗೃಹೋಪಯೋಗಿ ವಸ್ತುಗಳನ್ನು ಸಾಗಣೆ ಮಾಡುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ”ದಾಖಲೆಗಳಿದ್ದೂ ಚೆಕ್‌ ಪೋಸ್ಟ್‌ಗಳಲ್ಲಿ ಜನರಿಗೆ ಅನಗತ್ಯ ತೊಂದರೆ ನೀಡಿದರೆ ಪರಿಶೀಲನೆ ನಡೆಸಲು ಜಿ.ಪಂ ಸಿಇಒ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನೀತಿ ಸಂಹಿತೆ ಜಾರಿಗಾಗಿ ರಾಜ್ಯಾದ್ಯಂತ 702 ನಾಕಾಗಳನ್ನು ಆರಂಭಿಸಲಾಗಿದೆ. 1512 ಫ್ಲೈಯಿಂಗ್‌ ಸ್ಕ್ವಾಡ್‌, 1837 ಸ್ಪಾಟಿಕ್‌ ಸರ್ವೆಲೆನ್ಸ್‌ ತಂಡ ರಚನೆ ಮಾಡಲಾಗಿದೆ. ಇದುವರೆಗೆ 30.16 ಲಕ್ಷ ನಗದು ಹಾಗೂ 73111 ಲೀಟರ್‌ ಮಧ್ಯ ವಶಪಡಿಸಿಕೊಳ್ಳಲಾಗಿದೆ,” ಎಂದು ವಿವರಿಸಿದರು.

ಬ್ಯಾಂಕ್‌ ವಹಿವಾಟು ಮೇಲೆ ಕಣ್ಣು: ದೊಡ್ಡ ಮೊತ್ತದ ಬ್ಯಾಂಕ್‌ ವಹಿವಾಟಿನ ಮೇಲೂ ಕಣ್ಗಾವಲು ಇಡಲಾಗುತ್ತದೆ. 1 ಲಕ್ಷ ಮೀರಿದ ಹಣ ಒಂದೇ ದಿನ ಯಾರದಾದ್ದರೂ ಖಾತೆಗೆ ಠೇವಣಿಯಾದರೆ ಜಿಲ್ಲಾಧಿಕಾರಿಗಳು ಪರಿಶೀಲಿಸುತ್ತಾರೆ. 10 ಲಕ್ಷ ರೂ. ಮೀರಿದ ಹಣ ಠೇವಣಿಯಾದಾಗ ಐಟಿ ವಿಚಾರಣೆ ಎದುರಿಸಬೇಕಾಗುತ್ತದೆ. ಡಿಜಿಟಲ್‌ ಹಣ ವರ್ಗಾವಣೆ ಬಗ್ಗೆಯೂ ಆಯೋಗ ನಿಗಾ ವಹಿಸುತ್ತದೆ.

ಮದುವೆಗೆ ಅನುಮತಿ ಬೇಕಿಲ್ಲ: ಮದುವೆ, ಹುಟ್ಟುಹಬ್ಬ ಸೇರಿದಂತೆ ರಾಜಕೀಯೇತರ ಕಾರ್ಯಕ್ರಮಕ್ಕೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಚುನಾವಣೆ ಆಯೋಗದ ಅನುಮತಿ ಬೇಕಿಲ್ಲ. ಕೆಲ ಜಿಲ್ಲೆಗಳಲ್ಲಿ ಮದುವೆ ಕಾರ್ಯಕ್ರಮಕ್ಕೂ ಡಿಸಿಗಳ ಪರವಾನಗಿ ಪಡೆಯಲು ಜನ ಭೇಟಿ ನೀಡುತ್ತಿದ್ದಾರೆ. ಸಾರ್ವಜನಿಕರು ಇಂಥದ್ದಕ್ಕೆಲ್ಲ ಆಯೋಗದ ಪರವಾನಗಿ ಕೇಳಬೇಕಿಲ್ಲ. ಆದರೆ ಯಾವುದೇ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ಭಾಗಿಯಾಗಿ ಊಟ, ಉಡುಗೊರೆಗಳಿಗೆ ವ್ಯವಸ್ಥೆ ಮಾಡಿದರೆ ನೀತಿ ಸಂಹಿತೆ ಜಾರಿ ದಳ ಕ್ರಮ ತೆಗೆದುಕೊಳ್ಳುತ್ತದೆ.

ಬ್ಯಾಂಕ್‌ಗಳಿಗೂ ಎಚ್ಚರಿಕೆ : ಬ್ಯಾಂಕ್‌ಗಳು ಹಣ ವರ್ಗಾವಣೆ ಮಾಡುವಾಗ ರಿಸರ್ವ್‌ ಬ್ಯಾಂಕ್‌ ಈಗಾಗಲೇ ಜಾರಿಗೊಳಿಸಿರುವ ಸ್ಥಾಯಿ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ನಗದನ್ನು ಹೊರಗುತ್ತಿಗೆ ಏಜೆನ್ಸಿ ಮೂಲಕ ಸಾಗಿಸಬಾರದು. ಹಣ ಸಾಗಣೆ ವೇಳೆ ಬ್ಯಾಂಕಿನ ಅಧಿಕೃತ ಪತ್ರ ಹಾಗೂ ಕರೆನ್ಸಿ ವಿವರ ಹೊಂದಿರಬೇಕು. ತಪಾಸಣೆ ಸಂದರ್ಭದಲ್ಲಿ ಅಧಿಕಾರಿಗಳು ಸ್ಪಂದಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಹೆಚ್ಚಳ : ”2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 14.42 ಕೋಟಿ ರೂ. ನಗದು, 2014ರ ಲೋಕಸಭೆ ಚುನಾವಣೆಯಲ್ಲಿ 28 ಕೋಟಿ ರೂ. ನಗದು, 2018ರ ವಿಧಾನಸಭೆ ಚುನಾವಣೆ ವೇಳೆ 92 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ವಶಪಡಿಸಿಕೊಂಡ ಹಣದ ಪೈಕಿ 35.16 ಕೋಟಿ ರೂ.ಯನ್ನು ಅಕ್ರಮ ಬಳಕೆಗೆ ಸಂಬಂಧಪಟ್ಟಿದ್ದಲ್ಲ ಎಂದು ವಾಪಸ್‌ ನೀಡಲಾಗಿದೆ,” ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದರು.

About the author

ಕನ್ನಡ ಟುಡೆ

Leave a Comment