ರಾಜಕೀಯ

ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗಿಂತ ಹಿಂದುಳಿದ ಮಿತ್ರ ಪಕ್ಷ: ಉಪಸಮರಕ್ಕೆ ಜೆಡಿಎಸ್ ಉಸ್ತುವಾರಿಗಳಿಲ್ಲ

ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ ತೋರುತ್ತಿರುವ ಉತ್ಸಾಹ ಜೆಡಿಎಸ್‌ ಪಾಳಯದಲ್ಲಿ ಮಾಯವಾಗಿದ್ದು, ಅಧಿಕೃತ ಚುನಾವಣಾ ಉಸ್ತುವಾರಿಗೆ ‘ದಳಪತಿ’ಗಳನ್ನು ಇನ್ನೂ ನಿಯೋಜಿಸಿಲ್ಲ.

ಉಪಚುನಾವಣೆ ನಡೆಯುತ್ತಿರುವ ಐದೂ ಕ್ಷೇತ್ರಗಳಿಗೆ ಕಾಂಗ್ರೆಸ್‌ ಈಗಾಗಲೇ ತನ್ನ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಮೈತ್ರಿ ಧರ್ಮ ಪಾಲನೆ ಮಾಡಬೇಕೆಂಬ ಕಾರಣಕ್ಕೆ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲೂ ಹಿರಿಯ ಸಚಿವರು ಹಾಗೂ ಮುಖಂಡರಿಗೆ ಚುನಾವಣಾ ಜವಾಬ್ದಾರಿ ಒಪ್ಪಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿಯಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಡಿ.ಕೆ.ಶಿವಕುಮಾರ್‌ ಸೋದರ ಡಿ.ಕೆ.ಸುರೇಶ್‌ ಅವರಿಗೆ ಭಿನ್ನಮತ ಶಮನಗೊಳಿಸಿ ಗೆಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಹಿರಿಯ ಸಚಿವ ಆರ್‌.ವಿ.ದೇಶಪಾಂಡೆಯವರಿಗೆ ಉಸ್ತುವಾರಿ ನೀಡಲಾಗಿದೆ. ಆದರೆ ಜೆಡಿಎಸ್‌ ಮಾತ್ರ ಇದುವರೆಗೆ ತನ್ನ ಅಧಿಕೃತ ಉಸ್ತುವಾರಿಗಳನ್ನು ನೇಮಿಸಿಲ್ಲ.

ಆರಂಭದಿಂದಲೂ ಉಪಚುನಾವಣೆ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಮುಖಂಡರಷ್ಟು ಗಂಭೀರವಾಗಿ ಜೆಡಿಎಸ್‌ ನಾಯಕರು ತೆಗೆದುಕೊಂಡಿಲ್ಲ. ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರಾಮನಗರ ಹಾಗೂ ಮಂಡ್ಯದಲ್ಲಿ ಗೆಲುವು ಅನಾಯಾಸವಾಗಿ ಲಭಿಸುತ್ತದೆ ಎಂಬ ವಿಶ್ವಾಸವೇ ಇದಕ್ಕೆ ಕಾರಣ. ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳು ಬಿಜೆಪಿ ಭದ್ರಕೋಟೆಯಾಗಿದ್ದು ಈ ಎರಡು ಕ್ಷೇತ್ರಗಳನ್ನು ಕೈ ಪಾಳಯಕ್ಕೆ ಬಿಟ್ಟುಕೊಡಲು ಜೆಡಿಎಸ್‌ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿತ್ತು. ಆದರೆ ಕೊನೆಕ್ಷಣದಲ್ಲಿ ಮಧು ಬಂಗಾರಪ್ಪ ಅವರನ್ನು ಮಿತ್ರ ಪಕ್ಷಗಳ ಉಮೇದುವಾರನಾಗಿ ನಿಯೋಜಿಸಲಾಗಿದೆ. ಚುನಾವಣಾ ಜವಾಬ್ದಾರಿ ಒಪ್ಪಿಕೊಳ್ಳುವುದಕ್ಕೆ ಜೆಡಿಎಸ್‌ನ ಸಚಿವರು ಹಿಂದೇಟು ಹಾಕುತ್ತಿದ್ದು, ಎಲ್ಲವನ್ನೂ ಸಿಎಂ ಕುಮಾರಸ್ವಾಮಿಯವರಿಗೊಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಜೆಡಿಎಸ್‌ ಮೂಲಗಳು ಮಾತ್ರ ಈ ಆರೋಪವನ್ನು ನಿರಾಕರಿಸುತ್ತಿದ್ದು, ಅಧಿಕೃತ ಉಸ್ತುವಾರಿಯನ್ನು ನೇಮಿಸದೇ ಇದ್ದರೂ ಸಚಿವರು ಹಾಗೂ ಪ್ರಮುಖ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ ಎನ್ನುತ್ತಿವೆ. ರಾಮನಗರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಖುದ್ದು ಕುಮಾರಸ್ವಾಮಿಯವರೇ ವಹಿಸಿಕೊಂಡಿದ್ದು, ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ನೀಡಲಾಗಿದೆ. ಬಳ್ಳಾರಿಯಲ್ಲಿ ಸಚಿವ ಬಂಡೆಪ್ಪ ಕಾಶಂಪುರ್‌ಗೆ ಜವಾಬ್ದಾರಿ ನೀಡಲಾಗಿದೆ. ಜಮಖಂಡಿಯಲ್ಲಿ ಪಶುಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ. ಇನ್ನು ಮಂಡ್ಯದಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ ಹಾಗೂ ಸಿ.ಎಸ್‌.ಪುಟ್ಟರಾಜು ಚುನಾವಣಾ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ಜೆಡಿಎಸ್‌ ಮೂಲಗಳಿಂದ ತಿಳಿದು ಬಂದಿದೆ. ಆದಾಗಿಯೂ ಉಪಚುನಾವಣೆ ಬಗ್ಗೆ ಕಾಂಗ್ರೆಸ್‌ ಪಾಳಯ ತೋರುವ ಉತ್ಸಾಹ ಜೆಡಿಎಸ್‌ನಲ್ಲಿ ಕಂಡು ಬರುತ್ತಿಲ್ಲ.

ನಿಗದಿಯಾಗದ ಜಂಟಿ ಸಭೆ : ಜಾತ್ಯತೀತ ಶಕ್ತಿಗಳು ಒಂದಾದರೆ ಬಿಜೆಪಿಯನ್ನು ಹಿಮ್ಮೆಟ್ಟಿಸಬಹುದೆಂಬ ಸಂದೇಶವನ್ನು ಐದು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ರವಾನೆ ಮಾಡಬಹುದೆಂಬ ಲೆಕ್ಕಾಚಾರವನ್ನು ಕಾಂಗ್ರೆಸ್‌ ನಾಯಕರು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ಜಂಟಿ ಪ್ರಚಾರ ಸಭೆ ಆಯೋಜಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 31ರಂದು ಶಿವಮೊಗ್ಗದಲ್ಲಿ ಜಂಟಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ದಿಲ್ಲಿಗೆ ದೇವೇಗೌಡರು : ಸಂಸತ್ತಿನ ಸ್ಥಾಯಿ ಸಮಿತಿ ಸಭೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೋಮವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು, ಸಭೆ ಬಳಿಕ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿಗೆ ಸಮಯ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಕಾಂಗ್ರೆಸ್‌ನ ಕೆಲ ಪ್ರಮುಖ ನಾಯಕರನ್ನು ಅವರು ಭೇಟಿ ಮಾಡಲಿದ್ದು, ಅಕ್ಟೋಬರ್‌ 3ರ ಬಳಿಕ ಸಂಪುಟ ವಿಸ್ತರಣೆ ನಡೆಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment