ರಾಷ್ಟ್ರ ಸುದ್ದಿ

ಚುನಾವಣೆ ವೇಳೆ ಮಾತ್ರ ಕಾಂಗ್ರೆಸ್ ಗೆ ಬಡವರ ನೆನಪಾಗುತ್ತೆ: ಮೋದಿ ಟಾಂಗ್

ಒಡಿಶಾ: ಚುನಾವಣೆಯ ಸಂದರ್ಭದಲ್ಲಿ ಮಾತ್ರ ವಿಪಕ್ಷ(ಕಾಂಗ್ರೆಸ್)ಗಳಿಗೆ ಬಡವರ ನೆನಪಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಡುಬಡವರಿಗೆ “ನ್ಯಾಯ” ಯೋಜನೆ ಮೂಲಕ ವಾರ್ಷಿಕ 72 ಸಾವಿರ ರೂಪಾಯಿ ಹಣವನ್ನು ಖಾತೆಗೆ ಹಾಕುವುದಾಗಿ ಭರವಸೆ ನೀಡಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದಲ್ಲಿ ದೇಶದ 25 ಕೋಟಿ ಕಡುಬಡವರು ನ್ಯಾಯ್ ಯೋಜನೆಯ ಲಾಭ ಪಡೆಯಲಿದ್ದಾರೆ. ಇದೊಂದು ಕ್ರಾಂತಿಕಾರಿ ಸ್ಕೀಮ್ ಆಗಿದ್ದು, ಇದರಿಂದ ಭಾರತ ಮತ್ತಷ್ಟು ಬದಲಾವಣೆ ಕಾಣಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ. ಆದರೆ ಅವರು ಬಡವರ ಹಕ್ಕುಗಳನ್ನೇ ಕಸಿದುಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಿಜ ಪ್ರಣಾಳಿಕೆ. ಬಡವರ ಹಕ್ಕನ್ನು ಕಿತ್ತುಕೊಳ್ಳುವುದೇ ಅದರ ನೀತಿ ಮತ್ತು ತತ್ವವಾಗಿದೆ ಎಂದು ಕಿಡಿಕಾರಿದರು. ಅವರು ಒಡಿಶಾದ ಕಾಲಾಹಂಡಿಯಲ್ಲಿ ಭವಾನಿಪಟ್ಟಣ ಜಿಲ್ಲೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯ್ ಸಂಕಲ್ಪ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ, ದೆಹಲಿಯಿಂದ ಕಳುಹಿಸುವ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಬಡ ಬುಡಕಟ್ಟು ಜನರಿಗೆ ತಲುಪುತ್ತದೆ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕಾಲಾಹಂಡಿಯಲ್ಲಿ ಹೇಳಿದ್ದರು. ತದನಂತರ ದಶಕಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಒಂದು ರೂಪಾಯಿಯಲ್ಲಿ 16ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂಬುದನ್ನು ಒಪ್ಪಿಕೊಂಡಿತ್ತು. ಇದೀಗ 25 ವರ್ಷ ಕಳೆಯುತ್ತಾ ಬಂದರೂ ಒಡಿಶಾಕ್ಕೆ ಕಾಂಗ್ರೆಸ್ ಪರಿಹಾರ ರೂಪದಲ್ಲಿ ನೀಡಿರುವುದು ಕೇವಲ ಒಂದು ಪೈಸೆ ಮಾತ್ರ. ನೀವು ಇಂತಹ ಜನರ ಮಾತನ್ನು ನಂಬುತ್ತೀರಾ ಎಂದು ಮೋದಿ ಪ್ರಶ್ನಿಸಿದ್ದಾರೆ. ಈಗ ಕೇಂದ್ರ ಸರ್ಕಾರ ಬಡವರಿಗೆ 100ಪೈಸೆಯನ್ನು ಕಳುಹಿಸುತ್ತಿದೆ. ಅದರಲ್ಲಿ ಪೂರ್ಣ ಹಣ ಬಡವರಿಗೆ ತಲುಪುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಗೆ ದಶಕಗಳಿಂದ ಸಾಧ್ಯವಾಗದಿರುವುದನ್ನು ನಾವು(ಬಿಜೆಪಿ) ಕಳೆದ 5ವರ್ಷಗಳಲ್ಲಿ ಹಣ ಜನರಿಗೆ ಸಮರ್ಪಕವಾಗಿ ತಲುಪುವಂತೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಿಜು ಜನತಾ ದಳ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿ, ಕಳೆದ 2 ದಶಕಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವುದಾಗಿ ಆರೋಪಿಸಿದರು.

About the author

ಕನ್ನಡ ಟುಡೆ

Leave a Comment