ರಾಜಕೀಯ

ಚುನಾವಣೆ ಸಮಯದಲ್ಲಿ ಅನಿಲ ಭಾಗ್ಯ ಅನುಷ್ಠಾನಕ್ಕೆ ಸರ್ಕಾರದ ಯತ್ನ: ಜಗದೀಶ್​ ಶೆಟ್ಟರ್

ಹುಬ್ಬಳ್ಳಿ: ಚುನಾವಣೆ ಸಮಯದಲ್ಲಿ ಅನಿಲ ಭಾಗ್ಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್​ ಶೆಟ್ಟರ್​ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌‌ಗೆ ವೋಟು ಹಾಕುವವರಿಗೆ ಎಲ್‌ಪಿಜಿ ಸ್ಟೌ ಕೊಡಲು ಯತ್ನಿಸುತ್ತಿದ್ದಾರೆ. ಸ್ಟೌ​ ಒದಗಿಸಲು ಸರ್ಕಾರ ಎರಡು ಕಂಪನಿಗೆ ಆರ್ಡರ್ ಕೊಟ್ಟಿದ್ದು, ಕಾನೂನು ಬಾಹಿರವಾಗಿ ಗುತ್ತಿಗೆ ಕೊಡಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋದಾಮಿನಲ್ಲಿ ಸ್ಟೌ​ಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ದೂರು ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯನವರು ಚುನಾವಣೆ ಗೆಲ್ಲಲು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಯುನಿವರ್ಸಿಟಿ ಬಿಲ್ ಆ್ಯಕ್ಟ್ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಆದರೆ, ರಾಯಚೂರು ವಿವಿ ವಿಶೇಷ ಅಧಿಕಾರಿಯಾಗಿ ಪ್ರೊಫೆಸರ್ ಮುಜಾಫರ್ ಅಸಾದಿ ನೇಮಕ ಮಾಡಲಾಗಿದೆ. ಮೈಸೂರು ವಿವಿಯಲ್ಲಿ ಪ್ರೊಫೆಸರ್ ಆಗಿದ್ದ ಮುಜಾಫರ್ ಅಸಾದಿ ನೇಮಕ ಕಾನೂನು ಬಾಹಿರ ಎಂದು ಹೇಳಿದರು. ಚುನಾವಣೆ ಅನುಕೂಲಕ್ಕಾಗಿ ನೇಮಕ ಮಾಡಿದ್ದಾರೆ. ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ 2,878 ಕೋಟಿ ಮಾತ್ರ ಸೊಸೈಟಿಗಳಿಗೆ ಪಾವತಿಸಿದ್ದಾರೆ. 5,282 ಕೋಟಿ ರೂಪಾಯಿ ಕೊಡುವುದು ಬಾಕಿಯಿದೆ. ನುಡಿದಂತೆ ನಡೆದಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಬೋಗಸ್. ರೈತರಿಗೆ ಹೊಸ ಸಾಲ ಸಿಗದೆ ತೊಂದರೆಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ರೈತರಿಗೆ ಅಸಮಾಧಾನವಿದೆ ಎಂದರು.

About the author

ಕನ್ನಡ ಟುಡೆ

Leave a Comment