ಸಿನಿ ಸಮಾಚಾರ

ಚೆನ್ನೈನಲ್ಲೂ ರಾಕಿ ಭಾಯ್ ಹವಾ, ಕೆಜಿಎಫ್ ಥಿಯೇಟರ್ ಸಂಖ್ಯೆ 100 ರಿಂದ 300ಕ್ಕೆ ಹೆಚ್ಚಳ

ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಇನ್ನೂ ಜೋರಾಗಿದ್ದು, ಪರಭಾಷಾ ಚಿತ್ರಗಳು ಅಸ್ತಿತ್ವಕ್ಕಾಗಿ ಹೋರಾಡುವ ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ತಮಿಳು ಚಿತ್ರಗಳನ್ನೇ ಹಿಂದಿಕ್ಕಿ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ.
ಹೌದು.. ಈ ಬಗ್ಗೆ ತಮಿಳುನಾಡಿನಲ್ಲಿ ಚಿತ್ರ ವಿತರಣೆ ಮಾಡುತ್ತಿರುವ ನಟ ವಿಶಾಲ್ ಮಾಲೀಕತ್ವದ ವಿಶಾಲ್ ಫಿಲ್ಮ್ ಫ್ಯಾಕ್ಟರಿ ತನ್ನ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರದ ಸ್ಕ್ರೀನ್ ಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದೆ. ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ಡಿಸೆಂಬರ್ 21ರಂದು ಸುಮಾರು 100 ಚಿತ್ರಗಳಲ್ಲಿ ತೆರೆ ಕಂಡಿತ್ತು. ಕೆಜಿಎಫ್ ನೊಂದಿಗೆ ನಟ ಧನುಷ್ ಅಭಿನಯದ ಮಾರಿ-2 ಮತ್ತು ಶಾರುಖ್ ಖಾನ್ ರ ಜೀರೋ ಚಿತ್ರಗಳೂ ಕೂಡ ಬಿಡುಗಡೆಯಾಗಿದ್ದವು. ಆದರೆ ಇದೀಗ ಕೆಜಿಎಫ್ ಚಿತ್ರ ತಮಿಳುನಾಡು ಬಾಕ್ಸ್ ಆಫೀಸ್ ನಲ್ಲೂ ಧೂಳೆಬ್ಬಿಸುತ್ತಿದ್ದು, 100 ಸ್ಕ್ರೀನ್ ಗಳಲ್ಲಿದ್ದ ಕೆಜಿಎಫ್ ಚಿತ್ರ ತನ್ನ ವ್ಯಾಪ್ತಿಯನ್ನು ಇದೀಗ 300ಕ್ಕೂ ಅಧಿಕ ಸ್ಕ್ರೀನ್ ಗಳಿಗೆ ವಿಸ್ತರಿಸಿದೆ. ಆ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ತನ್ನ ದರ್ಬಾರ್ ಮುಂದುವರೆಸಿದೆ.
ಪರಭಾಷಾ ಚಿತ್ರಗಳು ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಹೋರಾಡುವ ಸಂದರ್ಭದಲ್ಲಿ ತಮಿಳು ಹೊರತು ಪಡಿಸಿ ಅದರಲ್ಲೂ ಕನ್ನಡ ಭಾಷೆಯ ಚಿತ್ರವೊಂದು ಈ ಮಟ್ಟಿಗೆ ಯಶಸ್ಸು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ.

About the author

ಕನ್ನಡ ಟುಡೆ

Leave a Comment