ರಾಜ್ಯ ಸುದ್ದಿ

ಜನರಿಗೆ ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲಾಗಿದೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ”ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರ ಸಹಕಾರದಿಂದ ಸರಕಾರ ನಡೆಸುವ ಅವಕಾಶ ಸಿಕ್ಕಿದೆ. ನನ್ನಿಂದ ಹಲವಾರು ನಿರೀಕ್ಷೆ ಬಯಸಿದ್ದಾರೆ, ಈ ಎರಡು ಸರ್ಕಾರಗಳಲ್ಲಿ 400 ಕಾರ್ಯಕ್ರಮ ರೂಪಿಸಲಾಗಿದೆ, ನಮ್ಮ ಮೈತ್ರಿ ಸರಕಾರದ ಮೇಲೆ ಬಹುದೊಡ್ಡ ಸವಾಲಿದೆ. ಜನರಿಗೆ ಕೊಟ್ಟ ವಿಶ್ವಾಸದ ಮಾತುಗಳಿಂದ ದೂರ ಸರಿಯಬಾರದು ಎಂದು ರೈತರ ಸಾಲ ಮನ್ನಾ ಮಾಡಲಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ಘೋಷಣೆ ಮಾಡಿದ ಸಾಲಮನ್ನಾ ಮೊತ್ತವನ್ನು ಪೂರ್ತಿ ಭರಿಸಲಾಗಿದೆ, ಈಗ ಮಾಡಿರುವ 9458 ಕೋಟಿ ಸಾಲಮನ್ನಾ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.” ಎಂದು ಪತ್ರಿಕಾ ಸಂವಾದದ ವೇಳೆ ಸಿಎಂ ಕುಮಾರಸ್ವಾಮಿ ಹೇಳಿದರು. ಇನ್ನು, ”ಮಾರ್ಚ್‌ವರೆಗೆ ಸಾಲಮನ್ನಾ ಯೋಜನೆ ಅವಧಿ ಇದೆ. 44 ಲಕ್ಷ ಕುಟುಂಬಗಳು ಇದರ ಲಾಭ ಪಡೆಯುತ್ತಿದ್ದಾರೆ. ಆರ್ಥಿಕ ಶಿಸ್ತು ಗಮನದಲ್ಲಿರಿಸಿ ಈ ಯೋಜನೆ ತರಲಾಗಿದೆ. ಈ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜತೆಗೆ, ಶಾಲಾ ಕಾಲೇಜು ಕಟ್ಟಡಗಳ ದುರಸ್ತಿಗಾಗಿ 2500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ವರ್ಷದ ಸೆಪ್ಟೆಂಬರ್ ಅಂತ್ಯದವರೆಗೆ ಶೇ. 38 ರಷ್ಟು ಹಣ ಖರ್ಚು ಮಾಡಿದ್ದೇವೆ” ಎಂದು ಅವರು ತಿಳಿಸಿದರು.

ಅಲ್ಲದೆ, ”7 ಕೆ.ಜಿ.ಅಕ್ಕಿ ಪಡೆಯುವ ಪಲಾನುಭವಿಗಳ ಸಂಖ್ಯೆ ಒಂದು ಕೋಟಿ 24 ಲಕ್ಷದಷ್ಟು ಏರಿಕೆಯಾಗಿದೆ. ಹೀಗೆ ಹಲವಾರು ರೀತಿಯ ಸವಾಲು ನನ್ನ ಎದುರಿಗಿದೆ. ಇನ್ನೊಂದು ತಿಂಗಳಲ್ಲಿ ಬೆಂಗಳೂರು ಫೆರಿಫೆರಲ್ ರಸ್ತೆ ಯೋಜನೆಗೆ ಚಾಲನೆ ನೀಡಲಾಗುವುದು. ಸರ್ಕಾರದ ಖಜಾನೆ ಭರ್ತಿಯಾಗಿದೆ. ಈ ಬಗ್ಗೆ ಅನುಮಾನ ಬೇಡ” ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ”ಸರ್ಕಾರದ ಅಸ್ಥಿರತೆ ಬಗ್ಗೆ ದಿನನಿತ್ಯ ವರದಿ ಮಾಡಿದರೆ ಅಧಿಕಾರಿಗಳು ನಮ್ಮ ಬಗ್ಗೆ ಯಾವ ನಂಬಿಕೆ ಇಟ್ಟು ಕೆಲಸ ಮಾಡುತ್ತಾರೆ, ವಾಸ್ತವಾಂಶಗಳನ್ನು ವರದಿ ಮಾಡಿ” ಎಂದು ಮಾಧ್ಯಮಗಳಿಗೆ ಸಿಎಂ ಮನವಿ ಮಾಡಿದರು. ಅಲ್ಲದೆ, ”ಕೊಡಗಿನಲ್ಲಿ ಮನೆ ಕಳೆದು ಕೊಂಡವರಿಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಲು ಹಾಗೂ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆಯೂ ಕ್ರಮ ಕೈಗೊಂಡಿದ್ದೇವೆ” ಎಂದೂ ಅವರು ಹೇಳಿದರು.

ಇನ್ನೊಂದೆಡೆ,” ನಮ್ಮ ಕುಟುಂಬ ದೈವದಲ್ಲಿ ನಂಬಿಕೆ ಇಟ್ಟಿದ್ದರಿಂದ ದೇವಾಸ್ಥಾನಗಳಿಗೆ ಬೇಟಿ ನೀಡುತ್ತಿದ್ದೇನೆ. 36 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಸೇರಿದಂತೆ ಲೋಕೋಪಯೋಗಿ ಯೋಜನೆಗಳನ್ನು ರೂಪಿಸಲಾಗಿದೆ. ರಾಜ್ಯದ ಮಲೆನಾಡಿನ 400 ಸಂಕ‌ತೂಗು ಸೇತುವೆಗಳನ್ನು ನಿರ್ಮಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ನಾನು ಐದು ವರ್ಷ ಅಧಿಕಾರದಲ್ಲಿರುತ್ತೇನೆ, ಏಕೆಂದರೆ ನನಗೆ ದೈವದ ಆಶೀರ್ವಾದ ಇದೆ. ಆದರೆ, ನಮ್ಮ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಧ್ಯಮದವರ ಸಹಕಾರ ಮುಖ್ಯ” ಎಂದು ಪತ್ರಿಕಾ ಸಂವಾದದ ವೇಳೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.

About the author

ಕನ್ನಡ ಟುಡೆ

Leave a Comment