ರಾಷ್ಟ್ರ ಸುದ್ದಿ

ಜನವರಿ 1ರಿಂದ ತೆಲಂಗಾಣ, ಆಂಧ್ರಕ್ಕೆ ಪ್ರತ್ಯೇಕ ಹೈಕೋರ್ಟ್‌

ಹೈದರಾಬಾದ್‌: ಮುಂದಿನ ಜನವರಿ 1ರಿಂದ ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಪ್ರತ್ಯೇಕ ಹೈಕೋರ್ಟ್‌ ಕಾರ್ಯಾರಂಭಿಸಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅಮರಾವತಿಯಲ್ಲಿ ಪ್ರತ್ಯೇಕ ಹೈಕೋರ್ಟ್ ಆರಂಭಿಸಲು ಆದೇಶ ನೀಡಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ವಿಭಜನೆಗೊಂಡ ನಾಲ್ಕೂವರೆ ವರ್ಷಗಳ ಬಳಿಕ ಎರಡೂ ರಾಜ್ಯಗಳು ತಮ್ಮದೇ ಹೈಕೋರ್ಟ್‌ಗಳನ್ನು ಪಡೆದುಕೊಳ್ಳುತ್ತಿವೆ. ಇದುವರೆಗೂ ಹೈದರಾಬಾದ್ ಹೈಕೋರ್ಟ್‌ ಎರಡೂ ರಾಜ್ಯಗಳಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿತ್ತು. ಇನ್ನು ಮುಂದೆ, 2019ರ ಜನವರಿ 1ರಿಂದ ಅದು ತೆಲಂಗಾಣ ಹೈಕೋರ್ಟ್‌ ಆಗಿ ಕಾರ್ಯನಿರ್ವಹಿಸಲಿದೆ.

ಪ್ರತ್ಯೇಕ ರಾಜ್ಯದ ಕನಸು ನನಸಾಗಿಸಿಕೊಂಡ ಬಳಿಕ ತೆಲಂಗಾಣ ತನ್ನದೇ ಆದ ಹೈಕೋರ್ಟ್ ಪಡೆಯಲು ಯತ್ನಿಸುತ್ತಿತ್ತು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಅದೇ ದಿನ ಸಂಜೆ ಪ್ರತ್ಯೇಕ ಹೈಕೋರ್ಟ್ ಸ್ಥಾಪಿಸುವ ರಾಷ್ಟ್ರಪತಿಗಳ ಆದೇಶ ಹೊರಬಿದ್ದಿರುವುದು ಕಾಕತಾಳೀಯವೆನಿಸಿದೆ.

ಆಂಧ್ರ ಹೈಕೋರ್ಟ್ ಕಾರ್ಯಾರಂಭಕ್ಕೆ ಇನ್ನು ಮೂರೇ ದಿನ ಬಾಕಿ: ಆಂದ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಜ.1ರಿಂದ ನೂತನ ಹೈಕೋರ್ಟ್‌ ಕಾರ್ಯಾರಂಭ ಮಾಡಲಿದೆ. ಈ ಹೈಕೋರ್ಟಗೆ ವರ್ಗಾವಣೆ ಪಡೆಯುವ ಆಯ್ಕೆಯನ್ನು ಹೈದರಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಿಗೆ ನೀಡಲಾಗಿದೆ. ಪ್ರಸ್ತುತ ನ್ಯಾ. ಟಿ.ಬಿ ರಾಧಾಕೃಷ್ಣನ್‌ ಹೈದರಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜ.1ರಿಂದ ಯಾವ ಹೈಕೋರ್ಟ್‌ ಹೊಣೆ ಹೊತ್ತುಕೊಳ್ಳಬೇಕೆಂಬ ಆಯ್ಕೆಯನ್ನು ಅವರಿಗೇ ಬಿಡಲಾಗಿದೆ.

About the author

ಕನ್ನಡ ಟುಡೆ

Leave a Comment