ಅಂಕಣಗಳು ರಾಜಕೀಯ

ಜನಸಮಾನ್ಯರಲ್ಲಿ ರಾಜಕೀಯ ಅಸ್ಪೃಶ್ಯತೆ ಏಕೆ?

    “ಎಲ್ಲಾ ಭ್ರಷ್ಟರು”, “ಸಾಮಾನ್ಯರಿಗಲ್ಲ”, “ನಾವು ರಾಜಕೀಯದಿಂದ ದೂರ ಇರ್ತೀವಿ”, “ಹೊಲಸು”, “ಮಹಿಳೆಯರಿಗೆ ಅದು ಸುರಕ್ಷಿತವಲ್ಲ” – ಇದು ರಾಜಕೀಯ ಅಂದಾಕ್ಷಣ  ಜನ ಸಾಮಾನ್ಯರಿಂದ ಕೇಳಿಬರುವ ಪ್ರತಿಕ್ರಿಯೆ. ನಿಜವಾಗಿಯೂ ರಾಜಕೀಯಕ್ಕೂ ಜನಸಮಾನ್ಯರಿಗೂ ಸಂಬಂಧವಿಲ್ಲವೇ? ಅವರ ದೈನಂದಿನ ಬದುಕಿನ ಮೇಲೆ ರಾಜಕೀಯದ ನೇರ ಪರಿಣಾಮವಿಲ್ಲವೆ? ನೀರು, ರಸ್ತೆ, ಮನೆ, ಸಾರಿಗೆ, ಶಿಕ್ಷಣ, ನೌಕರಿ ಇತ್ಯಾದಿ ಎಲ್ಲದರಲ್ಲೂ ರಾಜಕೀಯದ ನೇರ ಪರಿಣಾಮವಿದೆ. ಹಾಗಿದ್ದಲ್ಲಿ ಜನಸಮಾನ್ಯರಲ್ಲಿ ಈ ರಾಜಕೀಯ ಅಸ್ಪೃಶ್ಯತೆ ಏಕೆ?

        ನನ್ನ ಪರಿಚಯ – ಕಳೆದ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕಳೆದ ೪ ವರ್ಷಗಳಿಂದ ಪಕ್ಷದ ಸಂಘಟನೆ, ಇತರೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಈ ೪ ವರ್ಷಗಳ ಜನಸಂಪರ್ಕದ ಅನುಭವದಿಂದ ಸಿಕ್ಕ ಉತ್ತರಗಳಿಗಿಂತ, ಹುಟ್ಟಿಕೊಂಡ ಪ್ರಶ್ನೆಗಳು ಅನೇಕ. ಬೇರೆ ಬೇರೆ ವರ್ಗದ ಜನರು – ಪಟ್ಟಣ, ಗ್ರಾಮೀಣ, ಯುವಕರು, ಮಹಿಳೆಯರು ರಾಜಕೀಯದ ಬಗ್ಗೆ ಯಾವ ರೀತಿಯ ಅಭಿಪ್ರಾಯ, ದೃಷ್ಟಿಕೋನ ಹೊಂದಿದ್ದಾರೆ? ರಾಜಕೀಯ ಆಗು ಹೋಗುಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ ಅರಿವು ಎಷ್ಟರ ಮಟ್ಟಿಗೆ ಇದೆ?  ನಾನು ಪ್ರಚಾರ ಮಾಡುತ್ತಿದ್ದಾಗ ಬಹಳಷ್ಟು ಜನರನ್ನು ಕೇಳುವೆ – “ನೀವು ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳ ಹಿನ್ನೆಲೆ, ಅರ್ಹತೆ, ಕಾರ್ಯ ನಿರ್ವಹಣೆ ಬಗ್ಗೆ, ಪಕ್ಷಗಳ ನೀತಿ, ಪ್ರಣಾಳಿಕೆ ಬಗ್ಗೆ ಎಷ್ಟರ ಮಟ್ಟಿಗೆ ತಿಳಿದುಕೊಂಡಿರುವಿರಿ?” ಎಂದು. ಅದು ಹಾಗಿರಲಿ, ಹಲವರಿಗೆ ಕೊನೆಯ ಕ್ಷಣದವರೆಗೂ ಪಕ್ಷಗಳ ಅಭ್ಯರ್ಥಿ ಯಾರು ಅನ್ನುವುದೇ ಗೊತ್ತಿರುವುದಿಲ್ಲ ಎಂಬ ಸಂಗತಿ ದುಃಖಕರ. ಇನ್ನು ಸ್ವತಂತ್ರ ಅಭ್ಯರ್ಥಿಗಳನ್ನು ಬಹುತೇಕ ಕಡೆಗಣಿಸಲಾಗುತ್ತದೆ.

           ನನ್ನ ಸೀಮಿತ ಅನುಭವದಲ್ಲಿ ಕಂಡುಕೊಂಡ ಆಸಕ್ತಿದಾಯಕ ವಿಷಯವೆಂದರೆ ಆರ್ಥಿಕವಾಗಿ ಹಿಂದುಳಿದವರಲ್ಲಿ ಸ್ಥಳೀಯ ರಾಜಕೀಯದ ಬಗ್ಗೆ ಹೆಚ್ಚು ತಿಳುವಳಿಕೆ ಇದೆ, ಆದರೆ ಅದು ಅವರ ನಗರ / ಪಟ್ಟಣ / ಗ್ರಾಮಕ್ಕೆ ಅಥವಾ ರೈತರು / ವಿದ್ಯಾರ್ಥಿಗಳು / ಹಿಂದುಳಿದ ಗುಂಪಿನಂತಹ ತಮಗೆ ಸಂಬಂಧಪಟ್ಟ ಕ್ಷೇತ್ರಗಳಿಗೆ ಸೀಮಿತವಾಗಿದೆ. ಮಧ್ಯಮ ವರ್ಗದವರಲ್ಲಿ ಹೆಚ್ಚಾಗಿ ರಾಜಕೀಯದ ಜ್ಞಾನವನ್ನು ಹೊಂದಿದವರು ನಿವೃತ್ತ ಜನರಾಗಿದ್ದು – ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ, ಈ ಎಲ್ಲಾ ಮಟ್ಟದಲ್ಲಿಯೂ ತಿಳಿದಿರುತ್ತಾರೆ. ಇನ್ನು ತಮ್ಮ ಕುಟುಂಬಕ್ಕೇ ಸಮಯ ಕೊಡಲು ಕಷ್ಟ ಪಡುವ ಮಧ್ಯಮ ವರ್ಗದ ಉದ್ಯೋಗಸ್ತರು, ಸುದ್ದಿಗಳ ಮುಖ್ಯಾಂಶಗಳನ್ನು ಮಾತ್ರ ಓದಿ ತಪ್ಪು ಗ್ರಹಿಕೆಗಳನ್ನು ಮಾಡುವ ಸಾಧ್ಯತೆಯಿದೆ. ದಿನನಿತ್ಯ ರಾಜಕೀಯವನ್ನು ಚರ್ಚಿಸುವ ಜನರು ಬಹುಮಟ್ಟಿಗೆ ಮಧ್ಯಮ ವಯಸ್ಸಿನ ಪುರುಷರು. ಅವರು ಚರ್ಚಿಸುವುದು ಹೊಸ ನೀತಿಗಳು, ಕಲ್ಯಾಣ ಯೋಜನೆಗಳು, ಇತ್ಯಾದಿ ಆಗಿರದೆ ಹೆಚ್ಚಾಗಿ ರಾಜಕೀಯ ಗಾಸಿಪ್ ಆಗಿರುತ್ತದೆ. ಯುವಕರು, ಮಹಿಳೆಯರು ರಾಜಕೀಯವನ್ನು ಸಾಮಾನ್ಯ ವಿಷಯಗಳಲ್ಲಿ ಒಂದು ಎನ್ನುವಂತೆ ಚರ್ಚಿಸುತ್ತಾರೆಯೇ? ರಾಜಕಾರಣದ ಬಗ್ಗೆ ಸಂಭಾಷಣೆಯನ್ನು ಯಾರಾದರೂ ಪ್ರಾರಂಭಿಸಲು ಪ್ರಯತ್ನಿಸಿದರೆ, ಅವರು ಅಪಹಾಸ್ಯಕ್ಕೆ ಒಳಗಾಗಬಹುದು ಅಥವಾ ಇದು ನೀರಸ ವಿಷಯ ಎಂದು ತಳ್ಳಿ ಹಾಕಬಹುದು.

     ನಾವು ದೈನಂದಿನ ಜೀವನದಲ್ಲಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅರಿವು ಪಡೆಯಲು ಜಾಗೃತ ಪ್ರಯತ್ನ ಮಾಡುತ್ತೇವೆಯೇ? ತಾನಾಗಿಯೇ ಲಭ್ಯವಾಗುವ ಸುದ್ದಿಯನ್ನು ಮೀರಿ ಸರಿಯಾದ ಮಾಹಿತಿ ಪಡೆಯುವ ಪ್ರಯತ್ನ ಮಾಡುತ್ತೇವೆಯೇ? ಅನಧಿಕೃತ ಮಾಧ್ಯಮಗಳಿಂದ ಬಹಳಷ್ಟು ತಪ್ಪು ಮಾಹಿತಿ ಸಿಗುತ್ತಿರುವ ಈ ಕಾಲದಲ್ಲಿ, ಈ ಪ್ರಯತ್ನ ಅತ್ಯವಶ್ಯ. ಮತ ಚಲಾಯಿಸುವುದಕಷ್ಟೇ ಸೀಮಿತವೇ ನಾಗರಿಕರ ಜವಾಬ್ದಾರಿ? ಅನೇಕರು ಇದನ್ನು ಕೂಡಾ ಮಾಡುವುದಿಲ್ಲ. ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡುವುದೂ ನಾಗರಿಕರ ಕರ್ತವ್ಯವಲ್ಲವೇ? ಸಾಮಾನ್ಯರ ಧ್ವನಿ ವ್ಯವಸ್ಥೆಯಲ್ಲಿರುವವರಿಗೆ ಕೇಳಿಸುವುದಿಲ್ಲ ಎಂದು ಹಲವರು ಹೇಳಬಹುದು. ಹೌದು, ಏಕಾಂಗಿಯಾದರೆ, ಸಾಮಾನ್ಯರ ಧ್ವನಿ ಕೇಳುವವರಿಲ್ಲ. ಅದಕ್ಕಾಗಿಯೇ ನಾಗರಿಕ ವೇದಿಕೆಗಳು, ಸಂಘಟನೆಗಳು ಅತ್ಯಗತ್ಯ. ಸಮಾಜದ ನಿರ್ಮಾಣದಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುವ ಸರ್ಕಾರಿ ಯೋಜನೆಗಳ / ಕೆಲಸಗಳ ಬಗ್ಗೆ ಜಾಗರೂಕರಾಗಿರಿಬೇಕು. ಸಂಬಂಧಪಟ್ಟ ಅಧಿಕಾರಿಗಳು ಉತ್ತಮ ಪ್ರದರ್ಶನ ನೀಡವಂತೆ ಸಮಾಜ ಒತ್ತಡ ತರಬೇಕು. ಅಧಿಕಾರಿಗಳಿಗೆ ನಾಗರಿಕರು ತಮ್ಮ ಮೇಲೆ ನಿಗಾವಹಿಸಿದ್ದಾರೆ ಮತ್ತು ಸಾರ್ವಜನಿಕರಿಗೆ ತಾವು ಉತ್ತರದಾಯಿ ಎಂಬ ಎಚ್ಚರಿಕೆ ಮೂಡಬೇಕು. ನಾವು “ಬೇರೊಬ್ಬರು ಕಾಳಜಿವಹಿಸುತ್ತಾರೆ” ಎಂಬ ಧೋರಣೆಯನ್ನು ತ್ಯಜಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಭಾಗವಹಿಸುವ ಅಗತ್ಯವಿದೆ. ಇಂತಹ ಚಟುವಟಿಕೆಗಳಿಗೆ ಪ್ರತಿ ವಾರ ಕನಿಷ್ಠ ಎರಡು ಗಂಟೆಗಳಷ್ಟನ್ನಾದರೂ ನಾವು ಬಿಡುವು ಮಾಡಿಕೊಳ್ಳಾಗುವುದಿಲ್ಲವೇ? ಸಮಯದ ಅಭಾವ ಎಲ್ಲರಿಗೂ ಇದ್ದದ್ದೇ, ಮನಸ್ಸು ಮಾಡಬೇಕಷ್ಟೆ.

          ಮತದಾನ ಮಾಡಲು “ಯಾರೂ ಸರಿಯಿಲ್ಲ, ಇರುವವರಲ್ಲೇ ಅಲ್ಪ ದುಷ್ಟರನ್ನು ಆಯ್ಕೆ ಮಾಡಬೇಕಾಗಿದೆ” ಎಂದು ಎಲ್ಲರೂ ದೂರುತ್ತಾರೆ. ಹಾಗಿದ್ದಲ್ಲಿ  ಸ್ವಹಿತಾಸಕ್ತರು, ರಾಜಕೀಯ ಕುಟುಂಬಗಳು ನಮಗೆ ಅಭ್ಯರ್ಥಿಗಳ ಆಯ್ಕೆ ನೀಡುವುದನ್ನು ಕಾಯುವ ಬದಲು, ನಾಗರಿಕರೇ ಚುನಾವಣೆ ಸ್ಪರ್ಧಿಸಲು ಸೂಕ್ತವಾದ ಅಭ್ಯರ್ಥಿಗಳನ್ನು ಹುಡುಕಿ ಪ್ರೋತ್ಸಾಹಿಸಬಹುದಲ್ಲ?! ಜನ ಬೆಂಬಲವಿರುವಾಗ, ಹಣವು ಸಮಸ್ಯೆಯೇ ಅಲ್ಲ. ಜ್ಞಾನಿಗಳು, ವಿದ್ಯಾವಂತ ಜನರು, ಯುವಕರು, ಮಹಿಳೆಯರು, ಹೊಸ ಜನರು ರಾಜಕೀಯದಲ್ಲಿ ಸೇರಬೇಕೆಂದು ನಾವು ಬಯಸುತ್ತೇವೆ. ಒಳ್ಳೆಯ ಜನರು ರಾಜಕಾರಣದಲ್ಲಿ ಏಕೆ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಕೂಡ ಚರ್ಚಿಸುತ್ತಿರುತ್ತೇವೆ. ವಾಸ್ತವದಲ್ಲಿ ಅಂತಹ ಜನರು ರಾಜಕೀಯ ಸೇರುತ್ತಿಲ್ಲವಾದರೆ, ಅವರು ರಾಜಕೀಯವನ್ನು ಏಕೆ ಸೇರುತ್ತಿಲ್ಲ ಎಂಬದರ ಬಗ್ಗೆ ನಾವು ಗಮನಹರಿಸಬೇಕಾಗಿದೆ. ಅವರಿಗೆ ಯಾವುದೇ ಅಡೆತಡೆಗಳಿವೆಯೇ? ನಮ್ಮಲ್ಲಿ ಹಲವಾರು ಚಳುವಳಿಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು ಇದ್ದರೂ, ಅವರು ಏಕೆ ಸಕ್ರಿಯ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿಲ್ಲ?

   ರಾಜಕೀಯ ಸೇರುವ ಸಾಂಪ್ರದಾಯಿಕ ಮಾರ್ಗಗಳೆಂದರೆ ವಂಶ ರಾಜಕೀಯ, ಹಲವು ವರ್ಷಗಳ ಸಮಾಜಿಕ ಚಳುವಳಿಯ ನಂತರ ರಾಜಕೀಯಕ್ಕೆ ಬರುವುದು, ಕೆಲವು ಪಕ್ಷಗಳ ವಿದ್ಯಾರ್ಥಿ ಘಟಕದ ನಾಯಕರಾಗುವುದು, ಇತರೆ. ರಾಜಕೀಯವನ್ನು ವೃತ್ತಿಯಾಗಿ ಆಯ್ಕೆ ಮಾಡುವ ವ್ಯಕ್ತಿ ಸಾಮಾನ್ಯಾವಾಗಿ ಯಾವುದಾದರೂ ಪಕ್ಷಕ್ಕೆ ಸೇರಿ, ವರ್ಷಗಳ ಕಾಲ ಅನುಭವ ಪಡೆಯಬೇಕಾಗುತ್ತದೆ ಮತ್ತು ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಪಡೆಯಲು ಬಹಳ ವರ್ಷಗಳವರೆಗೆ ನಿರೀಕ್ಷೆಯಲ್ಲಿರಬೇಕಾಗುತ್ತದೆ. ಅಲ್ಲದೆ ಅನುಭವಗಳಿಸಲು, ಟಿಕೆಟ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು, ನುರಿತ, ಹಿರಿಯ ರಾಜಕಾರಣಿಯ ಅನುಯಾಯಿಯಾಗಬೇಕೆಂಬ ಒಂದು ಅಗತ್ಯವನ್ನು ಮರೆಯದಿರಿ.

     ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ರಾಜಕೀಯದಲ್ಲಿ ಪ್ರಸ್ತುತವಾಗಿರಲು ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹೀಗಿರುವಾಗ, ಇನ್ನೂ ಸಂಪಾದನೆ ಇಲ್ಲದ ಯುವಜನರು ರಾಜಕೀಯವನ್ನು ಹೇಗೆ ವೃತ್ತಿಜೀವನವನ್ನಾಗಿ ಆಯ್ಕೆ ಮಾಡುವ ಬಗ್ಗೆ ಯೋಚಿಸುತ್ತಾರೆ? ಇದಕ್ಕೆ ಸಾಕಷ್ಟು ಶ್ರಮ, ಸಮಯ ಮತ್ತು ಹಣ ಬೇಕಾಗುತ್ತದೆ. ಆದರೆ ಅಧಿಕಾರ ಪಡೆಯುವವರೆಗೆ ಯಾವುದೇ ಗಳಿಕೆ ಇರುವುದಿಲ್ಲ. ಮತ್ತೆ ಒಬ್ಬ ವ್ಯಕ್ತಿಯು ಹೊಸದಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ಬಯಸಿದರೆ, ಅವರು ರಾಜಕೀಯ ಜ್ಞಾನ / ಅನುಭವವನ್ನು ಪಡೆಯುವ ಬಗೆ ಹೇಗೆ? ಹಲವು ವಿಫಲ ಪ್ರಯತ್ನಗಳ ಮೂಲಕ ಕಠಿಣ ಪರಿಶ್ರಮದಿಂದ ಕಲಿಯುವುದೊಂದೇ ಈಗಿರುವ ದಾರಿ. ಇನ್ನೂ ಕುಟುಂಬದ ಸದಸ್ಯರಿಂದ “ಅನುಮತಿ” ಪಡೆಯುವ ಅಗತ್ಯವಿರುವಾಗ, ಮಹಿಳೆಯರು ರಾಜಕೀಯದಲ್ಲಿ ಹೇಗೆ ಭಾಗವಹಿಸುತ್ತಾರೆ?

       ಸಾಂಪ್ರದಾಯಿಕ ಮಾರ್ಗಗಳ ಮೊರೆ ಹೋಗದೆ, ಹೊಸಬರು, ಯುವಜನರು ಮತ್ತು ಮಹಿಳೆಯರು ರಾಜಕೀಯದಲ್ಲಿ ಪಾಲ್ಗೊಳ್ಳಲು, ಸಮಾಜವೇ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬಹುದಲ್ಲವೇ? ರಾಜಕೀಯ ಪ್ರವೇಶಿಸಲು ಬೇಕಿರುವ ಮಾರ್ಗದರ್ಶನ ಸಿಗುವಂತೆ, ಆತ್ಮವಿಶ್ವಾಸ ವರ್ಧಿಸುವಂತೆ, ಆಸಕ್ತಿಯುಳ್ಳವರಿಗೆ ತರಬೇತಿ ನೀಡಲು ರಾಜಕೀಯೇತರ ವೇದಿಕೆಯನ್ನು ಸಮಾಜವೇ ಏಕೆ ಸ್ಥಾಪಿಸಬಾರದು? ಎಲ್ಲಾ ವರ್ಗದ ಜನರು ರಾಜಕೀಯದಲ್ಲಿ ಪಾಲ್ಗೊಳ್ಳುವಂತಹ ವಾತಾವರಣವನ್ನು ಸಮಾಜವೇ ನಿರ್ಮಿಸಬೇಕಿದೆ.

ಗಾಂಧಿಜಿಯವರು ಹೇಳಿದಂತೆ “ನೀವು ಕಾಣಬಯಸುವ ಬದಲಾವಣೆ ನಿಮ್ಮಿಂದಲೇ ಆಗಲಿ”!

                                                                                      ಲೇಖಕರು: ಮಾಲವಿಕ ಗುಬ್ಬಿವಾಣಿ

                                                                        ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತೆ, ಮೈಸೂರು

About the author

ಕನ್ನಡ ಟುಡೆ

Leave a Comment