ರಾಷ್ಟ್ರ ಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಎನ್’ಕೌಂಟರ್: 3 ಉಗ್ರರನ್ನು ಸದೆಬಡಿದ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಫತೇಹ್ ಕಡಲ್ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್’ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ. ಶ್ರೀನಗರದ ಫತೇಹ್ ಕಡಲ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಭಾರತೀಯ ಸೇನಾಪಡೆ ಹಾಗೂ ಸಿಆರ್’ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತವರೆದ ಭದ್ರತಾ ಪಡೆಗಳು ಉಗ್ರರ ವಿರುದ್ಧ ಎನ್’ಕೌಂಟರ್ ನಡೆಸಲು ಆರಂಭಿಸಿದ್ದಾರೆ. ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿಗಳು ಲಭ್ಯವಾಗಿತ್ತು. ಹೀಗಾಗಿ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಅಲ್ಲದೆ, ಅರೆಸೇನಾ ಪಡೆಯ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಇಮಿತಿಯಾಜ್ ಇಸ್ಮಾಯಿಲ್ ಅವರು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಎನ್’ಕೌಂಟರ್ ನಡೆಸಿದ್ದ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಟಾಪ್ ಕಮಾಂಡ್ ಎಂದೇ ಹೇಳಲಾಗುತ್ತಿದ್ದ ಮನನ್ ವಾನಿ ಹಾಗೂ ಮತ್ತೊಬ್ಬ ಉಗ್ರ ಆಶಿಖ್ ಹುಸೇನ್ ಜರ್ಗರ್’ರನ್ನು ಹತ್ಯೆ ಮಾಡಿತ್ತು.

About the author

ಕನ್ನಡ ಟುಡೆ

Leave a Comment