ರಾಜಕೀಯ

ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ವಿಶ್ವನಾಥ್‌ ರಾಜೀನಾಮೆ

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರು ಡಿಸ್ಚಾರ್ಜ್‌ ಆಗಿದ್ದು ಶಾಸಕರ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಇನ್ನೂ ಕೆಲಕಾಲ ಅವರು ವಿಶ್ರಾಂತಿಯಲ್ಲಿರಬೇಕಾಗುತ್ತದೆ. ಹೀಗಾಗಿ ಅವರು ಉಪ ಚುನಾವಣೆ ಪ್ರಚಾರಕ್ಕೆ ತೆರಳುವುದು ಅನುಮಾನ. ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಚ್‌.ವಿಶ್ವನಾಥ್‌ ಅವರನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸದೇ ಇರುವುದಕ್ಕೆ ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಹಿತೈಷಿಗಳು ಹಾಗೂ ಸ್ನೇಹಿತರ ಜತೆ ಮಾತನಾಡುವಾಗ ಜೆಡಿಎಸ್‌ ನಾಯಕರ ಧೋರಣೆ ಹಾಗೂ ನಡೆ ಬಗ್ಗೆ ಅಸಮಾಧಾನ ತೋಡಿಕೊಂಡರು ಎನ್ನಲಾಗಿದೆ. ವಿಶೇಷಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸುವ ಔದಾರ್ಯ ತೋರಲಿಲ್ಲ. ಇದು ತಮಗೆ ಬಹಳ ನೋವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರೆನ್ನಲಾಗಿದೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವೇಳೆ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ಭೇಟಿ ಮಾಡಿದ್ದರು. ಆದರೆ ಈಗ ಒಬ್ಬರೂ ಭೇಟಿ ನೀಡದೇ ಇರುವುದು ಅವರಿಗೆ ನೋವು ತಂದಿದೆ. ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ದೀರ್ಘ ಪ್ರಯಾಣ ಮಾಡುವುದು ಅವರಿಗೆ ಕಷ್ಟಕರವಾಗಲಿದೆ, ಜತೆಗೆ ಪಕ್ಷ ಸಂಘಟನೆಯಂತಹ ಒತ್ತಡದ ಕೆಲಸಗಳನ್ನು ನಿಭಾಯಿಸುವುದು ಸಾಧ್ಯವಾಗದು. ವಿಶೇಷವಾಗಿ ದೀರ್ಘ ಪ್ರಯಾಣ ಮಾಡಬಾರದೆಂದು ವೈದ್ಯರೇ ಸಲಹೆ ನೀಡಿರುವುದರಿಂದ ಅವರು ಈಗ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೋ-ಬೇಡವೋ ಎಂಬ ಸಂದಿಗ್ಧದಲ್ಲಿ ಸಿಲುಕಿದ್ದಾರೆ. ಹಲವು ಹಿತೈಷಿಗಳ ಒತ್ತಾಯದ ಮೇರೆಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment