ರಾಜಕೀಯ

ಜೆಡಿಎಸ್-ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶನ: ಬಿಎಸ್‌ವೈ ಡೈರಿ ಕೆದಕಿದ ರಾಹುಲ್

ಬೆಂಗಳೂರು: ಬೃಹತ್‌ ಸಮಾವೇಶದ ಮೂಲಕ ದೋಸ್ತಿ ಪಕ್ಷಗಳ ನಾಯಕರು ಒಗ್ಗಟ್ಟಿನ ಸಂದೇಶ ರವಾನಿಸಿದ್ದು, ಲೋಕಸಭೆ ಚುನಾವಣೆ ಪ್ರಚಾರಕ್ಕೆ ಜಂಟಿಯಾಗಿ ಭರ್ಜರಿ ಚಾಲನೆ ನೀಡಿದ್ದಾರೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಡೈರಿ ಸ್ಫೋಟ ಪ್ರಕರಣವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ಕೆದಕಿದ್ದಾರೆ.

ತುಮಕೂರು ರಸ್ತೆ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಪರಿವರ್ತನಾ ರಾರ‍ಯಲಿಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ರಾಹುಲ್‌ ಗಾಂಧಿ ವೇದಿಕೆ ಹಂಚಿಕೊಂಡರು. ಉಭಯ ಪಕ್ಷಗಳೂ ಸೇರಿ ಬಿಜೆಪಿಯನ್ನು ದೂರವಿಡುವ ಹೋರಾಟ ನಡೆಸುತ್ತಿರುವುದನ್ನು ಸಾರುವ ಉದ್ದೇಶದಿಂದಲೇ ಈ ಸಮಾವೇಶ ಆಯೋಜಿಸಿದ್ದೇವೆ ಎಂದು ರಾಹುಲ್‌ ಹೇಳಿಕೊಂಡರು.

ಬಿಎಸ್‌ವೈ ಸಿಎಂ ಆಗಿದ್ದಾಗ ಬಿಜೆಪಿ ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಿದ್ದಾರೆ ಎನ್ನಲಾದ ಡೈರಿ ಬಗ್ಗೆ ರಾಹುಲ್‌ ಇದೇ ವೇಳೆ ಪ್ರಸ್ತಾಪಿಸಿದರು. ಕೆಲ ದಿನಗಳ ಹಿಂದೆ ಎಐಸಿಸಿ ವಕ್ತಾರ ರಣದೀಪ್‌ ಸುರ್ಜೇವಾಲಾ ಈ ಬಗ್ಗೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ, ಬಿಎಸ್‌ವೈ ಡೈರಿಯದೆಂದು ಹೇಳಲಾದ ಲೂಸ್‌ ಶೀಟ್‌ಗಳು ನಕಲಿ ಎಂದು ಐಟಿ ಸ್ಪಷ್ಟನೆ ನೀಡಿತ್ತು. ರಾರ‍ಯಲಿಯಲ್ಲಿ ಈ ವಿಚಾರ ಎತ್ತಿಕೊಂಡು ವಾಗ್ದಾಳಿ ನಡೆಸಿದ ರಾಹುಲ್‌ ”ರೈತರ ಸಾಲ ಮನ್ನಾಕ್ಕೆ ಹಣವಿಲ್ಲವೆಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಹೈಕಮಾಂಡ್‌ಗೆ ಕೊಡಲು 18 ಸಾವಿರ ಕೋಟಿ ರೂ. ಎಲ್ಲಿಂದ ಬಂತು? ಯಡಿಯೂರಪ್ಪ ಡೈರಿಯಲ್ಲಿರುವಂತೆ ಆಡ್ವಾಣಿ, ಜೇಟ್ಲಿ, ರಾಜನಾಥ್‌ ಸಿಂಗ್‌, ಗಡ್ಕರಿಗೆ ಹಣ ಸಂದಾಯ ಮಾಡಲಾಗಿದೆ. ಇದು ರಾಜ್ಯದ ಸಾಮಾನ್ಯ ರೈತರ ತೆರಿಗೆ ಹಣವಲ್ಲವೇ? ಅಧಿಕಾರ ದುರ್ಬಳಕೆ ಮಾಡಿಕೊಂಡ ಯಡಿಯೂರಪ್ಪ ಅದನ್ನು ವರಿಷ್ಠರಿಗೆ ಕಪ್ಪ ನೀಡಿದ್ದಾರೆ,” ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಉಭಯ ಪಕ್ಷಗಳ ಪ್ರಮುಖರು ಭಾಗಿಯಾಗಿದ್ದರು.

ಬಿಜೆಪಿ ವಿರುದ್ಧ ಹೋರಾಟ : ಬಿಜೆಪಿಯನ್ನು ದೂರವಿಡಲು ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ರಚಿಸಲಾಗಿದೆ. ಅದರ ಪ್ರಕಾರ ಜಂಟಿಯಾಗಿ ಲೋಕಸಭೆ ಚುನಾವಣೆ ಎದುರಿಸಲಾಗುತ್ತಿದೆ. ಕೇಂದ್ರದಲ್ಲೂ ಬಿಜೆಪಿ ವಿರುದ್ಧ ಹೋರಾಡಲು ರಾಜ್ಯದ ಮಾದರಿಯಲ್ಲೆ ಸರಕಾರ ರಚಿಸಲಾಗುವುದು. ಈ ಚುನಾವಣೆ ನಿರ್ಣಾಯಕವಾಗಿದ್ದು, ಬಿಜೆಪಿ ಮತ್ತು ಮೋದಿ ಅವರನ್ನು ಸೋಲಿಸಲು ಹಲವೆಡೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ರಾಹುಲ್‌ ತಿಳಿಸಿದರು.

ರಾಹುಲ್‌ ನೇತೃತ್ವದ ಸರಕಾರ ಬರಲಿ: ದೇವೇಗೌಡ ರಾಹುಲ್‌ ಗಾಂಧಿ ನೇತೃತ್ವದ ಸರಕಾರ ಬರಲಿ ಎಂದು ಅಪೇಕ್ಷಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ”ರಾಜ್ಯದಲ್ಲಿ 21 ಪಕ್ಷಗಳ ಮಹಾಮೈತ್ರಿಕೂಟವಾದಾಗ (ಎಚ್‌ಡಿಕೆ ಪ್ರಮಾಣವಚನದ ವೇಳೆ) ಪ್ರಧಾನಿಯವರು ಅದನ್ನು ಸಹಿಸಲಿಲ್ಲ. ಆದರೆ, ನನಗೆ ಒಂದು ಆಸೆಯಿದೆ. ರಾಹುಲ್‌ ಮುಂದಾಳತ್ವದಲ್ಲಿ ಹೊಸ ಸರಕಾರ ರಚನೆಯಾಗಬೇಕು. ಮೇ 23ರಂದು ಹೊಸ ಇತಿಹಾಸ ಬರೆಯಬೇಕಿದೆ. ಅದಕ್ಕಾಗಿ ನಾವು 28 ಕ್ಷೇತ್ರಗಳಲ್ಲಿ ಒಟ್ಟಾಗಿ ಹೋಗುತ್ತಿದ್ದೇವೆ. ಮೋದಿಯೇನು ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಕಾಶ್ಮೀರದ ಶಾಂತಿ ಕದಡಿದೆ. ನಮ್ಮಲ್ಲಿ ಎಲ್ಲ ಧರ್ಮದವರನ್ನು ಒಟ್ಟಿಗೆ ಕರೆದೊಯ್ಯುವ ನಾಯಕರಿದ್ದಾರೆ. ಅದಕ್ಕಾಗಿ ಯುಪಿಎಗೆ ಬೆಂಬಲಿಸಬೇಕು,” ಎಂದರು.

About the author

ಕನ್ನಡ ಟುಡೆ

Leave a Comment