ರಾಜ್ಯ ಸುದ್ದಿ

ಡಿ ಕೆ ಶಿವಕುಮಾರ್ ಸಂಧಾನ ಸಫಲ: ಪ್ರತಿಭಟನೆ ಹಿಂಪಡೆದ ಬೆಳಗಾವಿ ರೈತರು

ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬಾಕಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರೊಂದಿಗೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ, 15 ದಿನಗಳೊಳಗೆ ಬಾಕಿ ಹಣ ನೀಡುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಅವರು ಧರಣಿ ನಿರತ ಸ್ಥಳಕ್ಕೆ ತೆರಳಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮವೊಂದಕ್ಕಾಗಿ ಆಗಮಿಸಿದ್ದ ಸಚಿವ ಡಿಕೆಶಿ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ರೈತರ ಮನವೊಲಿಸಿದರು. ಕಳೆದ ಎರಡು ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಸಿದ್ದನಗೌಡ ಮೊದಗಿ ಮತ್ತು ಜಯಶ್ರಿ ಸಹ ಹೋರಾಟ ಕೈಬಿಟ್ಟಿದ್ದು, ಅವರಿಗೆ ಸಚಿವರು ಎಳನೀರನ್ನು ಕುಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರೈತರು ನ್ಯಾಯೋಚಿತ ಹೋರಾಟ ನಡೆಸಿದ್ದಾರೆ. ಸರ್ಕಾರದ ಗಮನ ಸೆಳೆದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ. ರೈತರು ನಮ್ಮವರು, ಸರ್ಕಾರ ರೈತರ ಪರವಾಗಿದೆ ಎಂದರು.

About the author

ಕನ್ನಡ ಟುಡೆ

Leave a Comment