ರಾಷ್ಟ್ರ ಸುದ್ದಿ

ಡ್ಯಾನ್ಸ್‌ ಬಾರ್‌ ತೆರೆಯಲು ಸುಪ್ರೀಂ ಸಮ್ಮತಿ

ಹೊಸದಿಲ್ಲಿ: ಡ್ಯಾನ್ಸ್‌ ಬಾರ್‌ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡುವುದಕ್ಕೆ ನಿರ್ಬಂಧ ಹೇರಿ ಮಹಾರಾಷ್ಟ್ರ ಸರಕಾರ 2016ರಲ್ಲಿ ತಂದಿದ್ದ ಕಠಿಣ ನಿಯಮಗಳನ್ನು ಸುಪ್ರೀಂಕೋರ್ಟ್‌ ಗುರುವಾರ ಸಡಿಲಗೊಳಿಸಿದ್ದು, ಇದರೊಂದಿಗೆ ಮುಂಬಯಿ ಸೇರಿ ಹಲವು ನಗರಗಳಲ್ಲಿ ಮತ್ತೆ ಡ್ಯಾನ್ಸ್‌ ಬಾರ್‌ ತೆರೆಯಲು ಹಾದಿ ಸುಲಭವಾದಂತಾಗಿದೆ. ಮಹಿಳೆಯರ ಘನತೆಗೆ ಅಗೌರವ ತೋರುವ ಹಾಗೂ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟ ಆರೋಪಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ, 2016ರಲ್ಲಿ ಜಾರಿಗೆ ತಂದ ಡ್ಯಾನ್ಸ್‌ ಬಾರ್‌ ನಿಷೇಧ ಕಾಯಿದೆಯನ್ನು ಪ್ರಶ್ನಿಸಿ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 2018ರ ಆಗಸ್ಟ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು. ಈಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ನಿಯಮಗಳನ್ನು ಸಡಿಲಗೊಳಿಸಿ ಡ್ಯಾನ್ಸ್‌ ಬಾರ್‌ ತೆರೆಯಲು ಅವಕಾಶ ಮಾಡಿಕೊಟ್ಟಿದೆ. 2005ರಿಂದಲೂ ಮಹಾರಾಷ್ಟ್ರ ಸರಕಾರ ಒಂದೇ ಒಂದು ಡ್ಯಾನ್ಸ್‌ ಬಾರ್‌ಗೆ ಲೈಸನ್ಸ್‌ ನೀಡದಿರುವುದನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ, ಇವುಗಳನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣ ನಿಷೇಧಿಸಲು ಸಾಧ್ಯವಿಲ್ಲ. ಮದ್ಯ ಮತ್ತು ನೃತ್ಯ ಒಟ್ಟಿಗೆ ಇರಬಹುದು ಎಂದು ಹೇಳಿದೆ. 2016ರ ಕಾಯಿದೆಯಲ್ಲಿ ಕೆಲವು ನಿಯಮಗಳನ್ನು ರದ್ದುಪಡಿಸಿದ ನ್ಯಾಯಾಲಯ, ಡ್ಯಾನ್ಸ್‌ ಬಾರ್‌ಗಳ ಕಾರ್ಯನಿರ್ವಹಣೆಗೆ ವಿಧಿಸಲಾಗಿದ್ದ ಸಂಜೆ 6ರಿಂದ ರಾತ್ರಿ 11.30ರವರೆಗಿನ ಸಮಯ ನಿಗದಿಯನ್ನು ಎತ್ತಿಹಿಡಿದಿದೆ. ಆದರೆ ಶಿಕ್ಷಣ ಸಂಸ್ಥೆ ಮತ್ತು ಧಾರ್ಮಿಕ ಸ್ಥಳಗಳಿಂದ ಒಂದು ಕಿಲೋಮೀಟರ್‌ ದೂರದಲ್ಲಿರಬೇಕೆಂಬ ನಿಯಮ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿದೆ. ಡ್ಯಾನ್ಸ್‌ ಬಾರ್‌ಗಳ ಮಾಲೀಕರು ‘ಉತ್ತಮ ನಡತೆಯುಳ್ಳವರು’ ಹಾಗೂ ಯಾವುದೇ ‘ಅಪರಾಧ ಹಿನ್ನೆಲೆ ಇಲ್ಲದವರು’ ಆಗಿರಬೇಕು ಎಂಬುದನ್ನು ನ್ಯಾಯಾಲಯ ತಳ್ಳಿಹಾಕಿದೆ. ಉತ್ತಮ ನಡತೆ, ಗುಣ ಹಾಗೂ ಹಿನ್ನೆಲೆ ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸಲು ಸರಿಯಾದ ವ್ಯಾಖ್ಯಾನ ಇಲ್ಲದಿರುವುದನ್ನುಅದು ತೀರ್ಪಿನಲ್ಲಿ ಪ್ರಸ್ತಾಪಿಸಿದೆ.

ಕೋಟ್‌ಗಳು ಸುಪ್ರೀಂ ತೀರ್ಪಿನ ವ್ಯಾಪ್ತಿಯೊಳಗೆ ಡ್ಯಾನ್ಸ್‌ ಬಾರ್‌ಗಳ ಅನುಮತಿಗೆ ಸರಕಾರ ಬದ್ಧವಾಗಿದೆ. ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. – ರಂಜಿತ್‌ ಪಾಟೀಲ್‌, ಮಹಾರಾಷ್ಟ್ರ ಗೃಹ ಸಚಿವ. 

ಸುಪ್ರೀಂ ತೀರ್ಪು ನಮ್ಮ ಹೋರಾಟಕ್ಕೆ ಸಂದ ಜಯ. ಇದನ್ನು ನಾವು ಸ್ವಾಗತಿಸುತ್ತೇವೆ. ಬಾರ್‌ ಡ್ಯಾನ್ಸ್‌ಗಳ ನಿಷೇಧದಿಂದ ಬೀದಿ ಪಾಲಾಗಿದ್ದ ಸಾವಿರಾರು ನೃತ್ಯಗಾರರಿಗೆ ಈಗ ಮತ್ತೆ ಅವಕಾಶಗಳು ದೊರೆಯಲಿವೆ. – ವರ್ಷಾ ಕಾಳೆ, ಭಾರತೀಯ ಬಾರ್‌ ಗರ್ಲ್ಸ್ಗಳ ಒಕ್ಕೂಟದ ಅಧ್ಯಕ್ಷೆ. 

ರಾಜ್ಯ ಸರಕಾರ ಡ್ಯಾನ್ಸ್‌ ಬಾರ್‌ಗಳನ್ನು ನಿಯಂತ್ರಿಸಬಹುದು. ಆದರೆ ಅವುಗಳ ಮೇಲೆ ನಿಷೇಧ ಹೇರಲು ಬರುವುದಿಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಗತಿಪರವಾಗಿದೆ. – ಅಭಾ ಸಿಂಗ್‌, ಸಾಮಾಜಿಕ ಕಾರ‍್ಯಕರ್ತೆ

 

About the author

ಕನ್ನಡ ಟುಡೆ

Leave a Comment