ರಾಜಕೀಯ

ತಮಿಳನಾಡು ರಾಜಕೀಯಕ್ಕೆ ಬಿಗ್ಗ್ ಟ್ವಿಸ್ಟ್

ತಮಿಳುನಾಡು ರಾಜಕೀಯಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಎಂ ಕನಸು ಕಾಣುತ್ತಿದ್ದ ಚಿನ್ನಮ್ಮ ಶಶಿಕಲಾ ನಟರಾಜನ್ ದೋಷಿ ಎಂದು ತೀರ್ಪಿತ್ತಿದೆ. ತಮಿಳಿಗರ ಅಮ್ಮ ಜಯಲಲಿತಾ ಮತ್ತು ಚಿನ್ನಮ್ಮ ಶಶಿಕಲಾ ನಟರಾಜನ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರಘೋಷ್‌ ಮತ್ತು ಅಮಿತಾವ್‌ ರಾಯ್‌ ಅವರಿರುವ ಪೀಠ ಜಯಲಲಿತಾ, ಚಿನ್ನಮ್ಮ ಶಶಿಕಲಾ ದತ್ತುಪುತ್ರ ಸುಧಾಕರನ್‌ ಮತ್ತು ಜೆ ಇಳವರಸಿ ದೋಷಿ ಎಂದು ತೀರ್ಪು ನೀಡಿ, ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದು ಮಾಡಿದೆ. ಹೀಗಾಗಿ ಶಶಿಕಲಾ ಸಿಎಂ ಕನಸು ಭಗ್ನವಾಗಿದ್ದು , ಆಕೆ ಜೈಲಿಗೆ ಹೋಗೋದು ಪಕ್ಕಾ ಆಗಿದೆ.

ಈ ತೀರ್ಪಿನಿಂದ ಶಶಿಕಲಾ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದ್ದರೇ ಪನ್ನೀರ್ ಸೆಲ್ವಂ ಬಣದಲ್ಲಿ ಸಂತಸ ಮನೆ ಮಾಡಿದೆ. ಶಶಿಕಲಾ ಬಣದಲ್ಲಿದ್ದ ಶಾಸಕರು ಒಬ್ಬೊಬ್ಬರಾಗಿಯೇ ಸೆಲ್ವಂ ಬಣ ಸೇರಲು ಸಜ್ಜಾಗುತ್ತಿದ್ದಾರೆ.

ಈ ತೀರ್ಪಿನ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿರಿಯ ನ್ಯಾಯವಾದಿ ಬಿ ವಿ ಆಚಾರ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ..?
1991 ರಿಂದ 1996ರ ನಡುವೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜೆ ಜಯಲಲಿತಾ 66.50 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿ-ಪಾಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಅಂದಿನ ಜನತಾ ಪಾರ್ಟಿ ಮುಖ್ಯಸ್ಥರಾಗಿದ್ದ ಡ್ರಾ.ಸುಬ್ರಹ್ಮಣಿಯನ್‌ ಸ್ವಾಮಿ ಮೊಕದ್ದಮೆ ಹೂಡಿದ್ದರು. ಇದೇ ಈ ಪ್ರಕರಣದ ಮೂಲ.

ಜಯಲಲಿತಾ ಮತ್ತು ಪಾಳಯ ದೋಷಿಗಳು:
2014ರ ಸೆಪ್ಟೆಂಬರ್‌ನಲ್ಲಿ ವಿಚಾರಣೆ ಪೂರ್ತಿಗೊಳಿಸಿ ಬೆಂಗಳೂರಿನ ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಡಿ ಕುನ್ಹಾ ಅವರು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಆಪ್ತೆ ಶಶಿಕಲಾ ನಟರಾಜನ್‌, ದತ್ತುಪುತ್ರ ಸುಧಾಕರನ್‌ ಮತ್ತು ಜೆ ಇಳವರಸಿ ಎಲ್ಲಾ ನಾಲ್ವರನ್ನೂ ದೋಷಿಗಳೆಂದು ತೀರ್ಪು ನೀಡಿದರು.
ನಾಲ್ವರಿಗೂ ತಲಾ ನಾಲ್ಕು ವರ್ಷಗಳ ಕಾರಾಗೃಹ ಸಜೆ ವಿಧಿಸಿದ ಕೋರ್ಟ್ ಜಯಲಲಿತಾಗೆ 100 ಕೋಟಿ ರೂಪಾಯಿ ದಂಡ ಹೇರಿತ್ತು. ಉಳಿದ ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿತ್ತು.

ಕರ್ನಾಟಕ ಹೈಕೋರ್ಟ್‌ನಿಂದ ಖುಲಾಸೆ:
ಆದರೆ ಕೆಳಹಂತದ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಜಯಲಲಿತಾ ಮತ್ತವರ ಪಾಳಯ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. 2015ರ ಮೇನಲ್ಲಿ ತೀರ್ಪು ನೀಡಿದ್ದ ನ್ಯಾಯಮೂರ್ತಿ ಸಿ.ಆರ್‌.ಕುಮಾರಸ್ವಾಮಿ ನೇತೃತ್ವದ ಏಕಸದಸ್ಯ ಪೀಠ ಜಯಲಿತಾ ಸೇರಿದಂತೆ ಎಲ್ಲಾ ನಾಲ್ವರನ್ನು ಖುಲಾಸೆಗೊಳಿಸಿತು.

ಹೈಕೋರ್ಟ್ ತೀರ್ಪಿನಲ್ಲಿ ದೋಷ!:
ಜಯಲಲಿತಾ ಮತ್ತವರ ಸಂಗಡಿಗರು ಸಂಪಾದಿಸಿದ ಅಕ್ರಮ ಆಸ್ತಿಯ ಮೊತ್ತ 2.82 ಕೋಟಿ ರೂಪಾಯಿ ಆಗಿರುವ ಕಾರಣ ಅದು ಒಟ್ಟು ಆಸ್ತಿಯ ಶೇಕಡಾ 10ಕ್ಕಿಂತಲ್ಲೂ ಕಡಿಮೆ ಇದೆ ಎಂದು ಹೇಳಿ ಹೈಕೋರ್ಟ್ ಖುಲಾಸೆಗೊಳಿಸಿತ್ತು.
ಆದರೆ ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಜಾನ್‌ ಮೈಕಲ್‌ ಡಿ ಕುನ್ಹಾ ಒಟ್ಟು ಅಕ್ರಮ ಆಸ್ತಿ 53.6 ಕೋಟಿ ರೂಪಾಯಿ ಎಂದು ತೀರ್ಪು ನೀಡಿದ್ದರು.

ಕರ್ನಾಟಕದ ವಾದ ಏನು..?:
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ 2015ರಲ್ಲೇ ಮೇಲ್ಮನವಿ ಸಲ್ಲಿಸಿತ್ತು. 2016 ಫೆಬ್ರವರಿ 28ರಿಂದ ಒಟ್ಟು 20 ದಿನಗಳ ಕಾಲ ವಾದ-ಪ್ರತಿವಾದ ಆಲಿಸಿದ್ದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಜೂನ್‌ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತೀರ್ಪು ನೀಡುವ ವೇಳೆ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಆರ್‌.ಕುಮಾರಸ್ವಾಮಿ ಲೋಪವೆಸಗಿದ್ದರೆ ಎಂಬುದು ಕರ್ನಾಟಕದ ವಾದ.

ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ಆಸ್ತಿ-ಪಾಸ್ತಿಗಳ ಮೌಲ್ಯ ಲೆಕ್ಕಾಚಾರದಲ್ಲಿ ಎಡವಲಾಗಿದೆ ಮತ್ತು ಈ ಕಾರಣದಿಂದಾಗಿ ಜಯಲಲಿತಾ ಸೇರಿ ನಾಲ್ವರೂ ದೋಷಮುಕ್ತಗೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ವಾದಿಸಿದೆ.

10 ಆಸ್ತಿಗಳ ಮೇಲಿನ ಸಾಲದ ಲೆಕ್ಕವನ್ನು ಹಾಕಬೇಕಾದರೆ ಏಕಸದಸ್ಯ ಪೀಠ ಎಡವಿದೆ. ಅದ್ದರಿಂದ ಅದರ ಮೊತ್ತ 24,17,31,274 ರೂಪಾಯಿ ಎಂಬ ತೀರ್ಮಾನಕ್ಕೆ ಬಂದಿದೆ. ಆದರೆ ಸೂಕ್ತವಾಗಿ ಲೆಕ್ಕ ಹಾಕಿದರೆ ಆಗ ಅದು ಕೇವಲ 10,67,31,274 ರೂಪಾಯಿ ಆಗುತ್ತದೆ.
ಅಂದರೆ ಹೈಕೋರ್ಟ್ ಪ್ರಕಾರ ಅಕ್ರಮ ಆಸ್ತಿ ಗಳಿಕೆಯು ಒಟ್ಟು ಆಸ್ತಿ-ಪಾಸ್ತಿಯ ಶೇಕಡಾ 8.12ರಷ್ಟಿದೆ ಅಷ್ಟೇ. ಆದರೆ ನಿಜವಾಗಲೂ ಅಕ್ರಮ ಆಸ್ತಿ-ಪಾಸ್ತಿಯ ಪ್ರಮಾಣವೂ ಒಟ್ಟು ಆಸ್ತಿ-ಪಾಸ್ತಿಯ ಶೇಕಡಾ 76.7ರಷ್ಟಿದೆ. ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಅಕ್ರಮ ಆಸ್ತಿಯ ಮೌಲ್ಯ 16,32,36,812 ರೂಪಾಯಿ. ಆದಾಯ 21,26,65,654 ರೂಪಾಯಿ.

ತನಿಖೆಯ ವೇಳೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯಲಾದ ಸಾಲವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ನ್ಯಾಯಮೂರ್ತಿಗಳು ಲೋಪವೆಸಗಿದ್ದಾರೆ. ಆದರೆ ತನಿಖೆ ವೇಳೆ ಅದನ್ನು ಪರಿಗಣಿಸಲಾಗಿದೆ.

ಅಕ್ರಮ ಆಸ್ತಿಯ ಪ್ರಮಾಣ ಒಟ್ಟು ಆಸ್ತಿಯ ಶೇಕಡಾ 10ಕ್ಕಿಂತ ಕಡಿಮೆ ಇದ್ದರೆ ಆಗ ದೋಷಮುಕ್ತಗೊಳಿಸಬಹುದು ಎಂಬ ಅಗ್ನಿಹೋತ್ರಿ ಪ್ರಕರಣದಲ್ಲಿ ನೀಡಲಾದ ತೀರ್ಪು ಇಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಅಗ್ನಿಹೋತ್ರಿ ಪ್ರಕರಣದಲ್ಲಿ ಪತ್ತೆಯಾದ ಮೀತಿ ಮೀರಿದ ಆಸ್ತಿಯ ಮೊತ್ತ ಕೇವಲ 11,350 ರೂಪಾಯಿಯಷ್ಟೇ ಮತ್ತು ಪತ್ತೆಯಾದ ಚೆಕ್‌ಗಳು 13 ವರ್ಷಗಳಷ್ಟು ಹಿಂದಿನವು.

ಹೀಗಾಗಿ ಮಿತಿ ಮೀರಿದ ಆಸ್ತಿಯ ಮೊತ್ತ ಅತ್ಯಲ್ಪವಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಆದರೆ ಜಯಲಲಿತಾ ಮತ್ತು ಉಳಿದ ನಾಲ್ವರ ವಿರುದ್ಧದ ಪ್ರಕರಣ ಆಗಲ್ಲ. ಅದು ಕೋಟಿ-ಕೋಟಿ ರೂಪಾಯಿಗೆ ಸಂಬಂಧಿಸಿದ್ದು.

About the author

ಕನ್ನಡ ಟುಡೆ

Leave a Comment