ಸಿನಿ ಸಮಾಚಾರ

ತಮಿಳಿಗೆ ರಶ್ಮಿಕಾ ಮಂದಣ್ಣ ಎಂಟ್ರಿ; ಅಭಿಮಾನಿಗಳಿಗೆ ಪ್ರೀತಿಯ ಸಂದೇಶ

ಕನ್ನಡ, ತೆಲುಗಿನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಕಾಲಿವುಡ್‌ಗೆ ಅಡಿಯಿಟ್ಟಿದ್ದಾರೆ. ಬುಧವಾರ (ಮಾರ್ಚ್ 13) ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಈ ಚಿತ್ರದ ಹೀರೋ ತಮಿಳು ನಟ ಕಾರ್ತಿ.

ಈ ಬಗ್ಗೆ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದು, “ಕನ್ನಡ ಮತ್ತು ತೆಲುಗಿನಲ್ಲಿ ನನಗೆ ಅದ್ಭುತ ಬೆಂಬಲ ನೀಡಿದಿರಿ. ತಮಿಳಿಗೆ ಯಾವಾಗ ಬರುತ್ತೀರಿ ಎಂದು ಕೇಳುತ್ತಿದ್ದರು. 2019ರಲ್ಲಿ ಕೊನೆಗೂ ಅಡಿಯಿಟ್ಟಿದ್ದೇನೆ. ಈ ತಂಡದ ಜತೆಗೆ ಸಿನಿಮಾ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ನಿಮ್ಮೆಲ್ಲರಿಗೂ ನನ್ನ ಕಡೆಯಿಂದ ಅಪಾರ ಪ್ರೀತಿ”ಎಂದಿದ್ದಾರೆ. ಇದೊಂದು ಆ್ಯಕ್ಷನ್ ಡ್ರಾಮಾ ಸಿನಿಮಾ ಆಗಿದ್ದು, ಭರ್ಜರಿ ಕಾಮಿಡಿಯನ್ನೂ ನಿರೀಕ್ಷಿಸಬಹುದಂತೆ. ಚಿತ್ರದಲ್ಲಿ ಯೋಗಿ ಬಾಬು ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ.

ವಿವೇಕ್-ಮೆರ್ವಿನ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ ಹಾಗೂ ರೂಬೆನ್ ಅವರ ಸಂಕಲನ ಈ ಚಿತ್ರಕ್ಕಿದೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರದ ಉಳಿದ ತಾರಾಗಣದ ಬಗ್ಗೆ ಶೀಘ್ರದಲ್ಲೇ ಘೋಷಿಸುವುದಾಗಿ ಚಿತ್ರತಂಡ ತಿಳಿಸಿದೆ. ಇದರ ಜತೆಗೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಧ್ರುವ ಸರ್ಜಾ ಜತೆಗೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಜತೆಗೆ ಡಿಯರ್ ಕಾಮ್ರೇಡ್ ಹಾಗೂ ಭೀಷ್ಮ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಡಿಯರ್ ಕಾಮ್ರೇಡ್ ಸಿನಿಮಾ ಕನ್ನಡ ಸೇರಿದಂತೆ ನಾಲ್ಕೂ ಭಾಷೆಯ ಸಿನಿಮಾಗಳು ಮೇ 22ರಂದು ಭರ್ಜರಿ ಬಿಡುಗಡೆ ಕಾಣುತ್ತಿದೆ. ಟೀಸರ್ ಸಹ ನಾಲ್ಕೂ ಭಾಷೆಗಳಲ್ಲಿ ಬರಲಿದೆ. ಮೈತ್ರಿ ಮೂವಿ ಮೇಕರ್ಸ್, ಬಿಗ್ ಬೆನ್ ಸಿನಿಮಾಸ್ ಜಂಟಿ ನಿರ್ಮಾಣದ ಸಿನಿಮಾದಲ್ಲಿ ಜಯ್ ದೇವರಕೊಂಡ ವೈದ್ಯಕೀಯ ವಿದ್ಯಾರ್ಥಿಯಾಗಿ, ಕ್ರಿಕೆಟರ್‌ ಆಗಿ ರಶ್ಮಿಕಾ ಮಂದಣ್ಣ ಕಾಣಿಸಲಿದ್ದಾರೆ. ಡಿಯರ್ ಕಾಮ್ರೇಡ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಇದೊಂದು ಪಕ್ಕಾ ಲವ್ ಸ್ಟೋರಿ ಎಂಬುದನ್ನು ಬಿಂಬಿಸಿದೆ. ಅರ್ಜುನ್ ರೆಡ್ಡಿ, ಗೀತ ಗೋವಿಂದಂ ಚಿತ್ರಗಳಿಂದ ವಿಜಯ್ ದೇವರಕೊಂಡ ದೇಶದಾದ್ಯಂತ ಕ್ರೇಜ್ ಹುಟ್ಟುಹಾಕಿದ್ದಾರೆ. ಈಗ ಮತ್ತೊಮ್ಮೆ ಈ ರೋಮ್ಯಾಂಟಿಕ್ ಜೋಡಿ ಮೋಡಿ ಮಾಡಲು ಬರುತ್ತಿದೆ.

About the author

ಕನ್ನಡ ಟುಡೆ

Leave a Comment