ರಾಷ್ಟ್ರ

ತಮಿಳುನಾಡಿನಲ್ಲಿ ಇಂದು ಬಂದ್‌ ಕಾವು

ಚೆನ್ನೈ: ಕಾವೇರಿ ಜಲ ನಿರ್ವಹಣೆ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನ ಎಲ್ಲ ಪಕ್ಷಗಳು ಗುರುವಾರ ರಾಜ್ಯವ್ಯಾಪಿ ಬಂದ್‌ ಘೋಷಿಸಿದೆ. ಸಾರಿಗೆ ಸಂಚಾರ ಬಂದ್‌ ಆಗಿದ್ದು,  ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ  ಬೆಳಗ್ಗೆ 6 ರಿಂದಲೇ ತಮಿಳುನಾಡಿಗೆ ಬಸ್‌ ಸಂಚಾರವನ್ನು ರದ್ದುಗೊಳಿಸಿದೆ.

ಬಂದ್‌ಗೆ ಎಲ್ಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಯುವ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಈಗಾಗಲೇ ತಮಿಳುನಾಡು ಸಿಎಂ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ಉಪವಾಸ ಸತ್ಯಾಗ್ರಹವನ್ನೂ ನಡೆಸುತ್ತಿದ್ದಾರೆ. ವಿರೋಧ ಪಕ್ಷ ಡಿಎಂಕೆ ಕೆಲವು ದಿನಗಳ ಹಿಂದಷ್ಟೇ ಸರ್ವಪಕ್ಷ ಸಭೆ ಕರೆದು ಈ ನಿರ್ಧಾರವನ್ನು ಘೋಷಿಸಿತ್ತು. ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ನೇತೃತ್ವದಲ್ಲಿ ಎಲ್ಲ ಪಕ್ಷಗಳೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಆಡಳಿತಾರೂಢ ಎಐಎಡಿಎಂಕೆ ಮುಖಂಡರು ನಡೆಸುತ್ತಿರುವ ಉಪವಾಸ ಕೇವಲ ನಾಟಕ ಎಂದು ಡಿಎಂಕೆ ಮುಖಂಡರು ಕಿಡಿ ಕಾರಿದ್ದಾರೆ. ಇನ್ನೊಂದೆಡೆ, ರಾಜ್ಯ ಸರಕಾರವು ಕೇಂದ್ರ ಸರಕಾರದ ಅಡಿಯಾಳಿ ನಂತೆ ಕೆಲಸ ಮಾಡುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ತನ್ನ ಕರ್ತವ್ಯ ಮುಗಿಯಿತು ಎಂದು ರಾಜ್ಯ ಸರಕಾರ ಭಾವಿಸಿದಂತಿದೆ ಎಂದು ಮಕ್ಕಳ್‌ ನೀತಿ ಮಯ್ಯಂ ಪಕ್ಷದ ನಾಯಕ ಹಾಗೂ ನಟ ಕಮಲ್‌  ಹಾಸನ್‌ ಕೂಡ ಟೀಕಿಸಿದ್ದಾರೆ.

ಕಾವೇರಿ ವಿಷಯಕ್ಕೆ ಕಾದಾಡಬೇಡಿ!: ಕಾವೇರಿ ನದಿ ನೀರು ನಿರ್ವಹಣೆ ಮಂಡಳಿ ರಚನೆಗೆ ಒತ್ತಾಯಿಸಿ  ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ರಾಜಕೀಯ ಹಾಗೂ ಪ್ರತಿಭಟನೆಗಳ ಕಾವು ಏರುತ್ತಿದ್ದಂತೆಯೇ ಶಾಂತಿ ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಸಲಹೆ ನೀಡಿದೆ. ತಮಿಳುನಾಡಿನ ಜನತೆಗೆ ಶಾಂತವಾಗಿರುವಂತೆ ಸೂಚಿಸಿ. ನಾವು ಕಾವೇರಿ ಸಮಸ್ಯೆಯನ್ನು ನೋಡಿಕೊಳ್ಳುತ್ತೇವೆ ಎಂದು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಬುಧವಾರ ಹೇಳಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಸೂಚಿಸಿದಂತೆ ಕಾವೇರಿ ಜಲ ನಿರ್ವಹಣೆ ಮಂಡಳಿಯನ್ನು ಕೇಂದ್ರ ನಿರ್ಮಿಸಲಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ತಮಿಳುನಾಡು ಸರಕಾರವು ಕೇಂದ್ರ ಸರಕಾರದ ವಿರುದ್ಧ ಸಲ್ಲಸದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಮಿಶ್ರಾ ಈ ಹೇಳಿಕೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment