ರಾಜ್ಯ ಸುದ್ದಿ

ತಲಕಾವೇರಿಯಲ್ಲಿ ತೀರ್ಥೋದ್ಭವ, ಭಕ್ತರಿಂದ ಕಾವೇರಿ ಮಾತೆಗೆ ನಮನ

ಮಡಿಕೇರಿ: ತಲಕಾವೇರಿಯಲ್ಲಿ ಬುಧವಾರ ಸಂಜೆ 6.43ರ ಮೇಷ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ತೀರ್ಥೋದ್ಭವವಾಯಿತು. ತೀರ್ಥೋದ್ಭವಕ್ಕೆ ಮುನ್ನ ಭಾಗಮಂಡಲದ ಶ್ರೀ ಭಗಂಡೇಶ್ವರನ ಸನ್ನಿಧಾನದಿಂದ
ಮಂಗಳವಾದ್ಯಗಳೊಂದಿಗೆ ದೇವತಕ್ಕ ನೇತೃತ್ವದಲ್ಲಿ ತರಲಾದ ಬೆಳ್ಳಿಯ ಬಿಂದಿಗೆ ಹಾಗೂ ಭಂಡಾರವನ್ನು ಅರ್ಚಕರು ಸ್ವೀಕರಿಸಿ, ಮಾತೆ ಕಾವೇರಿಗೆ ಸಾಂಪ್ರದಾಯಿಕ ಆಭರಣಗಳನ್ನು ತೊಡಿಸಿ, ಅಲಂಕರಿಸಿ, ಮಹಾ ಸಂಕಲ್ಪ ಪೂಜೆಗೆ ಅಣಿಯಾದರು. ತಲಕಾವೇರಿ ದೇವಾಲಯದ ತಕ್ಕಮುಖ್ಯಸ್ಥರಾದ ಕೋಡಿ ಕುಟುಂಬದ ಮೋಟಯ್ಯ ಉಪಸ್ಥಿತರಿದ್ದರು.

ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆಯುದ್ದಕ್ಕೂ ಗ್ರಾಮಸ್ಥರು ಅಲ್ಲಲ್ಲಿ ತಳಿರು ತೋರಣ, ಕಮಾನುಗಳನ್ನು ನಿರ್ಮಿಸಿದ್ದರು. ಪುಷ್ಪಾಲಂಕೃತ ಬ್ರಹ್ಮ ಕುಂಡಿಕೆ ಬಳಿ ಅಪರಾಹ್ನದಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಬೆಳಗಿನಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಮತ್ತು ನೆರೆಯ ಕೇರಳ, ತಮಿಳುನಾಡು, ಪುದುಚೇರಿ ಮುಂತಾದೆ ಡೆಗಳಿಂದ ಭಕ್ತರು ಆಗಮಿಸ ಲಾರಂಭಿಸಿದ್ದರು. ಭಕ್ತಾದಿಗಳು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೇಶಮುಂಡನ ಮಾಡಿಸಿ, ಸ್ನಾನ ಮಾಡಿ, ಶುಚಿಭೂìತರಾಗಿ, ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ನೆರವೇರಿಸಿ, ಭಗಂಡೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ತಲಕಾವೇರಿಯತ್ತ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭಾಗ ಮಂಡಲ ಸಂಗಮದ ಬಳಿಯಿರುವ ಕಟ್ಟಡದಲ್ಲಿ ಕೇಶಮುಂಡನ ಹಾಗೂ ಸಂಗಮದ ಬಳಿಯಲ್ಲೇ ಪಿತೃಕರ್ಮಗಳಿಗೆ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ, ಹಿರಿಯ ಅರ್ಚಕ ನಾರಾಯಣಾಚಾರ್‌, ಹಿರಿಯ ಪೊಲೀಸ್‌ ಅಧಿಕಾರಿ ಭಾಸ್ಕರ್‌ ರಾವ್‌, ಭಾಗಮಂಡಲ, ತಲಕಾವೇರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎಸ್‌. ತಮ್ಮಯ್ಯ ತೀರ್ಥೋದ್ಭವದ ಕ್ಷಣಕ್ಕೆ ಸಾಕ್ಷಿಯಾದರು.

 

About the author

ಕನ್ನಡ ಟುಡೆ

Leave a Comment