ಸಾಂಸ್ಕ್ರತಿಕ

ತಾಜ್‌ಮಹಲ್‌ ಪ್ರವೇಶ ಶುಲ್ಕವೀಗ ದುಬಾರಿ

ಆಗ್ರ : ಪ್ರೀತಿಯ ದ್ಯೋತಕವಾಗಿ ನಿರ್ಮಿಸಿರುವ ತಾಜ್‌ಮಹಲ್‌ ನೋಡಲು ಇದೀಗ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಈ ವರೆಗೆ 50 ರೂ.ನಲ್ಲಿ ಮುಖ್ಯ ವಸ್ತು ಪ್ರದರ್ಶನದ ಭಾಗಕ್ಕೆ ತೆರಳಲು ಅವಕಾಶ ನೀಡಿದ್ದ ಭಾರತೀಯ ಪುರಾತತ್ವ ಇಲಾಖೆ, ಈ ಎಂಟ್ರಿ ಫೀಸ್‌ ಅನ್ನು ಒಮ್ಮಿಂದೊಮ್ಮೆಲೇ 5 ಪಟ್ಟು ಹೆಚ್ಚಿಸಿದೆ. ಪ್ರಸ್ತುತ ತಾಜ್‌ಮಹಲ್‌ ಒಳ ಪ್ರವೇಶಕ್ಕೆ ಭಾರತೀಯರು ಬರೋಬ್ಬರಿ 250 ರೂ. ಪಾವತಿಸಬೇಕಾಗಿದ್ದು, ಅದೇ ವಿದೇಶಿಗರು 1300 ರೂ.ಗಳನ್ನು ನೀಡಬೇಕಾಗಿದೆ. ಅಲ್ಲದೆ ಸಾರ್ಕ್‌ ರಾಷ್ಟ್ರದ ಪ್ರಜೆಗಳು 540 ರೂ. ಬದಲಾಗಿ 740 ರೂ. ನೀಡಿ ತಾಜ್‌ಮಹಲ್‌ ಮುಖ್ಯ ಮ್ಯೂಸಿಯಂ ಪ್ರವೇಶಿಸಬೇಕಿದೆ. ಭಾರತೀಯ ಪುರಾತತ್ವ ಇಲಾಖೆಮುಖ್ಯ ಅಧಿಕಾರಿ ವಸಂತ್‌ ಸಾವಂಕರ್ ಈ ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ವಿಶ್ವದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ ಮೇಲೆ ಪ್ರವಾಸಿಗರ ಒತ್ತಡವನ್ನು ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ದಿಲ್ಲಿ ಹಾಗೂ ಸುತ್ತಮುತ್ತಲ ನಗರಗಳಿಂದ ವೀಕೆಂಡ್‌ ಡೆಸ್ಟಿನೇಷನ್‌ ಆಗಿರುವ ತಾಜ್‌ಮಹಲ್‌ಗೆ ರಜಾದಿನಗಳು ಹಾಗೂ ವಾರಾಂತ್ಯದಲ್ಲಿ ಸರಾಸರಿ 70 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ. ಈ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗದೆ.

50 ರೂ. ಪ್ರವೇಶವೂ ಇದೆ!
ಆರಂಭದಲ್ಲಿ ಪ್ರವೇಶ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದ್ದವು. ಬಳಿಕ 50 ರೂ. ಪ್ರವೇಶವನ್ನೂ ಉಳಿಸಿಕೊಳ್ಳಲಾಗಿದ್ದು, ಈ ವಿಭಾಗದಲ್ಲಿ ಮುಖ್ಯ ಗೋಪುರದ ಪ್ರವೇಶಕ್ಕೆ ನಿರ್ಬಂಧವಿರಲಿದೆ. ಯಮುನಾ ನದಿ ತೀರದ ಭಾಗ, ತಾಜ್‌ಮಹಲ್‌ ಹಿಂಭಾಗಗಳಿಗೆ ಮಾತ್ರ ಪ್ರವೇಶವಿರಲಿದೆ. 250 ರೂ. ಪ್ರವೇಶದ ವಿಭಾಗದಲ್ಲಿ ತಾಜ್‌ಮಹಲ್‌ ಮುಖ್ಯ ಗೋಪುರಕ್ಕೆ ಪ್ರವೇಶ ಇರಲಿದೆ. ಮುಖ್ಯ ಗೋಪುರದಲ್ಲಿ ಶಾಹಜಾನ್‌ ಮತ್ತು ಮುಮ್ತಾಜ್‌ ಮಹಲ್‌ನ ಗೋರಿ ಇದ್ದು, ಇದನ್ನು ನೋಡಲು ಅನೇಕ ಪ್ರವಾಸಿಗರು ಆಗಮಿಸುತ್ತಾರೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ತಾಜ್‌ಮಹಲ್‌ ವಾಯುಮಾಲಿನ್ಯ ಹಾಗೂ ಇನ್ನಿತರ ಕಾರಣಗಳಿಂದ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಶುಲ್ಕ ಹೆಚ್ಚಳಗೊಳಿಸಿ, ಪ್ರವೇಶ ವಿಭಾಗ ಸೃಷ್ಟಿಗೆ ಈ ಸಂಗತಿ ಮುಖ್ಯ ಕಾರಣ ಎನ್ನಲಾಗಿದೆ.

About the author

ಕನ್ನಡ ಟುಡೆ

Leave a Comment