ರಾಜಕೀಯ

ತಿಪ್ಪರಲಾಗ ಹಾಕಿದರೂ ಬಿಎಸ್‌ವೈ ಸಿಎಂ ಆಗಲ್ಲ: ಸಿದ್ದರಾಮಯ್ಯ

ಜಮಖಂಡಿ: ಬಿಜೆಪಿಯ ಮಿಸ್ಟರ್‌  ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ, ಅವರ ಮುಖ್ಯಮಂತ್ರಿಯಾಗುವ ಕನಸನ್ನು ನನಸಾಗಿಸಲು ಕಾಂಗ್ರೆಸ್‌ ಪಕ್ಷ ಎಂದೂ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಪಕ್ಷ ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಭಾನುವಾರ ಶಾಸಕ ಆನಂದ ನ್ಯಾಮಗೌಡ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ”ಯಡಿಯೂರಪ್ಪವರಿಗೆ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ಯಾವುದೇ ನೈತಿಕತೆ ಇಲ್ಲ, 2010 ರಲ್ಲಿ ಅಧಿಕಾರದಲ್ಲಿ ಅವರು ವೇಳೆ ರೈತರ ಸಾಲ ಮನ್ನಾ ಮಾಡಲು ಸರಕಾರದಲ್ಲಿ ನೋಟ್‌ ಮುದ್ರಿಸುವ ಯಂತ್ರವಿದೆಯಾ ಎಂದು ಕೇಳಿದ್ದರು” ಎಂದು ಹೇಳಿದರು.

ರಾಹುಲ್‌ ಪ್ರಧಾನಿಯಾಗುವುದು ನಿಶ್ಚಿತ : ನಮ್ಮ ಅಧಿಕಾರ ಅವಧಿಯಲ್ಲಿ ಪ್ರತಿ ರೈತನ 50 ಸಾವಿರದಷ್ಟು ಸಾಲ ಮನ್ನಾ ಮಾಡಿದ ಕೀರ್ತಿ ನಮಗಿದೆ. ಈಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್‌ ಸರಕಾರಗಳು ಅಧಿಕಾರಕ್ಕೆ ಬಂದ ತಕ್ಷ ಣ ರೈತರ ಸಾಲ ಮನ್ನಾ ಮಾಡಿದೆ. ರಾಹುಲ್‌ ಗಾಂಧಿ ನುಡಿದಂತೆ ನಡೆದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರು ಈ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ” ಎಂದು ಹೇಳಿದರು. ”ರಾಮನ ಜಪ-ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರಿಗೆ ರಾಮ ಮಂದಿರ ಕಟ್ಟುವ ನೆನಪು ಆಗುತ್ತದೆ. ಈ ಹಿಂದೆ ದೇಶದ ಮೂಲೆ-ಮೂಲೆಗಳಿಂದ ಇಟ್ಟಿಗೆ-ದುಡ್ಡು ಸಂಗ್ರಹಿದ್ದು, ಇಟ್ಟಿಗೆಯನ್ನು ಎಲ್ಲಿಟ್ಟಿದ್ದಾರೋ, ಸಂಗ್ರಹಿಸಿದ ದುಡ್ಡು ಜೇಬಿಗೆ ಹಾಕಿಕೊಂಡ ಬಿಜೆಪಿಯವರು ಶುದ್ಧ ಸುಳ್ಳುಗಾರರು ಅವರನ್ನು ಜನರು ನಂಬಬಾರದು” ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮಾತನಾಡಿ, ”ಜಮಖಂಡಿ ಮತದಾರ ನೀಡಿದ ಫಲಿತಾಂಶ ಇಡೀ ದೇಶಕ್ಕೆ ಉತ್ತಮ ಸಂದೇಶ ನೀಡಿದೆ. ಹೀಗಾಗಿ ಕಾಂಗ್ರೆಸ್‌ ದೇಶದ ಹೃದಯ ಭಾಗ ಗೆಲ್ಲಲು ಸಾಧ್ಯವಾಯಿತು. ಬಿಜೆಪಿಯವರು ರಾಹುಲ್‌ ಗಾಂಧಿ ವಿರುದ್ಧ ಹಗುರವಾಗಿ ಮಾತನಾಡಿ, ತೇಜೋವಧೆ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಅರ್ಥ ವ್ಯವಸ್ಥೆ ಹಾಳಾಗಿದೆ”ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌,ಆನಂದ ನ್ಯಾಮಗೌಡ ಮತ್ತಿತರರಿದ್ದರು.

About the author

ಕನ್ನಡ ಟುಡೆ

Leave a Comment