ರಾಷ್ಟ್ರ ಸುದ್ದಿ

ತೀವ್ರ ಕುತೂಹಲ ಮೂಡಿಸಿದ ಮಧ್ಯಪ್ರದೇಶ, ರಾಜಸ್ಥಾನ ಯಾರ ಮಡಿಲಿಗೆ

ನವದೆಹಲಿ:ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ), ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಹಾಗೂ ಮಿಜೋರಾಂನಲ್ಲಿ ಎಂಎನ್ ಎಫ್(ಮಿಜೋ ನ್ಯಾಷನಲ್ ಫ್ರಂಟ್) ಅಧಿಕಾರವನ್ನು ಕೈವಶ ಮಾಡಿಕೊಂಡಿದ್ದರೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಯಾರು ಗದ್ದುಗೆ ಏರಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಆರಂಭಿಕವಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ 101 ಸ್ಥಾನದಲ್ಲಿ ಮುನ್ನಡೆ ಸಾಧಿಸಿ ಸರಳ ಬಹುಮತದತ್ತ ದಾಪುಗಾಲಿಟ್ಟಿತ್ತು. ಆದರೆ ಮತಎಣಿಕೆ ಮುಂದುವರಿದಂತೆ ಕಾಂಗ್ರೆಸ್ 95ಸ್ಥಾನಗಳಿಗೆ ಕುಸಿತ ಕಂಡಿದ್ದರೆ, ಬಿಜೆಪಿ 80 ಸ್ಥಾನ ಹಾಗೂ ಇತರರು 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಒಟ್ಟು 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಅಧಿಕಾರ ನಡೆಸಲು 101 ಸ್ಥಾನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಮುಂದುವರಿದಿದೆ. ಏತನ್ಮಧ್ಯೆ ಇತರರು ಹಾಗೂ ಪಕ್ಷೇತರರನ್ನು ಸೆಳೆಯುವ ಯತ್ನ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿಯೂ ಆರಂಭಿಕವಾಗಿ ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿತ್ತು. ನಂತರ ಕಾಂಗ್ರೆಸ್ 109 ಸ್ಥಾನಗಳಲ್ಲಿ, ಬಿಜೆಪಿ 109 ಸ್ಥಾನಗಳಲ್ಲಿ, ಬಿಎಸ್ಪಿ 5 ಹಾಗೂ ಇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷದಿಂದ ಬಿಜೆಪಿ ಆಡಳಿತವಿದೆ. ಈ ಪೈಕಿ ಶಿವರಾಜ್ ಸಿಂಗ್ ಚೌಹಾಣ್ ಅವರದ್ದೇ 12 ವರ್ಷದ ಆಡಳಿತ ನಡೆಸಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 116 ಸ್ಥಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಮುಂದುವರಿದಿದೆ. ಕಳೆದ ಬಾರಿ ಬಿಜೆಪಿ 163 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಕೇವಲ 58 ಸ್ಥಾನ ಪಡೆದಿತ್ತು.

 

About the author

ಕನ್ನಡ ಟುಡೆ

Leave a Comment