ರಾಜ್ಯ ಸುದ್ದಿ

ತುಮಕೂರು: ಆಹಾರ ವ್ಯರ್ಥ ಮಾಡದಂತೆ ತಡೆದ ಸಿದ್ದಗಂಗಾ ಮಠದ ಬಾಲಕ; ವ್ಯಾಪಕ ಪ್ರಶಂಸೆ

ತುಮಕೂರು: ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಮರುದಿನ ಅಂತಿಮ ವಿಧಿವಿಧಾನದ ದಿನ ಮಠದಲ್ಲಿ ಸಾರ್ವಜನಿಕ ಭೋಜನ ಸಂದರ್ಭದಲ್ಲಿ ಮಠದ 8ನೇ ತರಗತಿ ಬಾಲಕನೊಬ್ಬ ಮಾಡಿರುವ ಕಾರ್ಯ ಇದೀಗ ಇಡೀ ರಾಜ್ಯದ ಜನತೆಯ ಗಮನ ಸೆಳೆದಿದೆ. ಮಧ್ಯಾಹ್ನ ಊಟದ ಕೌಂಟರ್ ನಲ್ಲಿ ಸಾರ್ವಜನಿಕರು ಊಟ ಮುಗಿಸಿ ತಂದು ಹಾಕುವ ತಟ್ಟೆಯ ವಿಲೇವಾರಿ ನೋಡಿಕೊಳ್ಳುತ್ತಿದ್ದ ಬಾಲಕ ಶಿವು ಅಲ್ಲಿನ ಭಕ್ತರಿಗೆ ಆಹಾರವನ್ನು ಸುಮ್ಮನೆ ಚೆಲ್ಲಿ ಹಾಳು ಮಾಡಬೇಡಿ, ತಿಂದು ಮುಗಿಸಿ ಎಂದು ಹೇಳಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮಠಕ್ಕೆ ಬಂದಿದ್ದ ಒಬ್ಬ ವ್ಯಕ್ತಿ ಊಟ ಮುಗಿಸಿ ತಟ್ಟೆಯನ್ನು ಕಸದ ಬುಟ್ಟಿಗೆ ಹಾಕಲು ಮುಂದಾದಾಗ ಅದರಲ್ಲಿ ಆಹಾರ ಬಿಟ್ಟಿರುವುದನ್ನು ಕಂಡ ಶಿವು ಅದನ್ನು ಬಿಸಾಕಬೇಕಿ, ತಿನ್ನಿ ಎಂದು ಒತ್ತಾಯಿಸಿದ್ದಾನೆ. ಅನ್ನಕ್ಕೆ ಸಾಂಬಾರು ಕಡಿಮೆಯಾಯಿತೆಂದು ಬಿಡುತ್ತಿದ್ದೇನೆ ಎಂದು ಹೇಳಿದಾಗ ಬಾಲಕ ಸಾಂಬಾರು ಹಾಕಿಸಿಕೊಂಡು ತಿಂದು ಮುಗಿಸಿ ಎಂದು ಹೇಳಿ ಸಾಂಬಾರು ಬಡಿಸಿ ತಿನ್ನಿಸಿಯೇ ಬಿಟ್ಟನು. ಈ ಸನ್ನಿವೇಶವನ್ನು ಮೊಬೈಲ್ ನಲ್ಲಿ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಅದು ವೈರಲ್ ಆಗಿದೆ. ಅದನ್ನು ಸಿದ್ದಗಂಗಾ ಮಠದ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು 1,800 ಮಂದಿ ವೀಕ್ಷಿಸಿ 75 ಮಂದಿ ಶೇರ್ ಮಾಡಿದ್ದಾರೆ. ಬಾಲಕ ಶಿವು ಚಾಮರಾಜನಗರ ಜಿಲ್ಲೆಯವನಾಗಿದ್ದು ತಾನು ಮಠಕ್ಕೆ ಬಂದ ಮೇಲೆ ಆಹಾರವನ್ನು ಹಾಳು ಮಾಡಬಾರದು, ಅನ್ನದ ಮಹತ್ವವೇನೆಂಬುದನ್ನು ಕಲಿತಿದ್ದೇನೆ ಎನ್ನುತ್ತಾನೆ. ನನ್ನ ಹಿರಿಯ ಸೋದರ ಗಂಜಿ ಕುಡಿದು ಬದುಕಿದ್ದು ನನಗೆ ನನ್ನ ಶಿಕ್ಷಕರು ಅನ್ನ ಬಿಸಾಡಬಾರದು ಎಂದು ಹೇಳಿಕೊಟ್ಟಿದ್ದಾರೆ ಎನ್ನುತ್ತಾನೆ. 

ಸಿದ್ದಗಂಗಾ ಮಠದಲ್ಲಿ ಸಂಸ್ಮರಣೋತ್ಸವ: ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ 11 ದಿನಗಳಾದ ನೆನೆಪಿನಲ್ಲಿ ಫೆಬ್ರವರಿ 3ರಂದು ಮಠದಲ್ಲಿ ಸಂಸ್ಮರಣ ಉತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಭಾಗವಹಿಸುವ ನಿರೀಕ್ಷೆಯಿದೆ.

About the author

ಕನ್ನಡ ಟುಡೆ

Leave a Comment