ಕ್ರೀಡೆ

ಪ್ರೊ ಕಬಡ್ಡಿ ಲೀಗ್: ತೂಗುಯ್ಯಾಲೆಯಲ್ಲಿ ಪಟನಾ ಪೈರೇಟ್ಸ್ ಪ್ಲೇಆಫ್ ಹಾದಿ

ಸತತ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯ ತನ್ನ ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ಸೋಲನುಭವಿಸಿದೆ. ತನ್ನ ಕೊನೇ ಲೀಗ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್​ಜೈಂಟ್ಸ್ ಎದುರು ಶರಣಾದ ಪಟನಾ ಪೈರೇಟ್ಸ್ ತಂಡದ ಪ್ಲೇಆಫ್​ಗೇರುವ ಅವಕಾಶ ಈಗ ತೂಗುಯ್ಯಾಲೆಯಲ್ಲಿ ನಿಂತಿದೆ. ಇನ್ನು ಗುರುವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡ ಆತಿಥೇಯ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋತರೆ ಅಥವಾ ಟೈ ಕಂಡರಷ್ಟೇ ಪಟನಾಗೆ ಮುಂದಿನ ಹಂತಕ್ಕೇರಬಹುದು.

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ರನ್ನರ್​ಅಪ್ ಗುಜರಾತ್ 37-29 ಅಂಕಗಳಿಂದ ಪಟನಾ ಪೈರೇಟ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ ಸತತ 6ನೇ ಗೆಲುವಿನ ಓಟ ಮುಂದುವರಿಸಿದ ಗುಜರಾತ್ ತಂಡ ಎ ಗುಂಪಿನಿಂದ ಅಗ್ರ ತಂಡವಾಗಿ ಪ್ಲೇಆಫ್​ಗೆ ಲಗ್ಗೆ ಇಟ್ಟಿತು. ಪ್ರಥಮಾರ್ಧದಲ್ಲಿ ಮಿಂಚಿದ್ದ ನಾಯಕ ಪ್ರದೀಪ್ ನರ್ವಾಲ್(10 ಅಂಕ) ದ್ವಿತೀಯಾರ್ಧದಲ್ಲಿ ವೈಫಲ್ಯ ಕಂಡರು. ಮೊದಲಾರ್ಧದಲ್ಲಿ ಸಮಬಲದ ಹೋರಾಟ ನೀಡಿದ್ದ ಪಟನಾ ದ್ವಿತೀಯಾರ್ಧದಲ್ಲಿ ಒಮ್ಮೆ ಆಲೌಟ್ ಆಗುವ ಮೂಲಕ ಗೆಲುವಿನ ಅವಕಾಶವನ್ನು ಕೈಚೆಲ್ಲಿತು. 31ನೇ ನಿಮಿಷದಲ್ಲಿ 17-21 ಹಿನ್ನಡೆಯಲ್ಲಿದ್ದ ಪಟನಾ ತಂಡದ ವಿಕಾಸ್ ಜಗ್ಲಾನ್ ರೈಡಿಂಗ್ ಇಳಿದಾಗ ಔಟಾದರು. ಆದರೆ ಅದೇ ಅವಧಿಯಲ್ಲಿ ಗುಜರಾತ್​ನ ಮೂವರು ಸೆಲ್ಪ್ ಔಟ್ ಆಗಿದ್ದರಿಂದ ಪಟನಾ20-22ರಿಂದ ಲಯಕ್ಕೆ ಮರಳಿತು. ಆದರೆ ಇದೇ ಸ್ಥಿರತೆಯನ್ನು ಮುಂದುವರಿಸಲು ಪಟನಾದಿಂದ ಸಾಧ್ಯವಾಗಲಿಲ್ಲ. 35ನೇ ನಿಮಿಷದಲ್ಲಿ ಪಟನಾ, ಎದುರಾಳಿ ಪಡೆಯ ಬಲಿಷ್ಠ ಟ್ಯಾಕಲ್​ಗೆ ಆಲೌಟ್ ಆಗಿದ್ದರಿಂದ ಹಿನ್ನಡೆ 23-28ಕ್ಕೆ ಏರಿತು. ಒತ್ತಡವಿದ್ದರೂ 36ನೇ ನಿಮಿಷದಲ್ಲಿ ಪ್ರದೀಪ್ ತಂದ 2 ಅಂಕದಿಂದ 27-30ರಿಂದ ಮತ್ತೆ ಲಯಕ್ಕೆ ಮರಳಿದರೂ, ಕೊನೇ 3 ನಿಮಿಷದೊಳಗೆ ಪ್ರದೀಪ್ 2 ಬಾರಿ ಸೂಪರ್ ಟ್ಯಾಕಲ್​ಗೆ ಸಿಲುಕಿದ್ದರಿಂದ ಪಟನಾದ ಗೆಲುವಿನ ಆಸೆ ದೂರವಾಯಿತು.

About the author

ಕನ್ನಡ ಟುಡೆ

Leave a Comment