ರಾಜ್ಯ ಸುದ್ದಿ

ತೆಂಗಿನ ಚಿಪ್ಪು ಬೇಕೇ, 1289 ರೂ.ಗೆ ಲಭ್ಯವಿದೆ

ಬೆಂಗಳೂರು: ಇಂಟರ್ನೆಟ್‌ನಲ್ಲಿ ಏನೆಲ್ಲಾ ಸಿಗುತ್ತದೆ ಅಂತ ಅಚ್ಚರಿಪಡುತ್ತೇವೆ. ಈ ಸುದ್ದಿಯು ಹಳ್ಳಿಗರಿಗಂತೂ ತಲೆ ಮೇಲೆ ಕೈಹೊತ್ತು ಅಚ್ಚರಿಪಡುವ ಸಂಗತಿ. ಹಳ್ಳಿಗಳಲ್ಲಿ ಯಾರಿಗೂ ಬೇಡವಾದ ಮತ್ತು ಎಲ್ಲದಕ್ಕೂ ಬೇಕೂ ಆಗಿರುವ  ತೆಂಗಿನ ಚಿಪ್ಪುಈಗ ಅಮೆಜಾನ್ ತಾಣದಲ್ಲಿ ಮಾರಾಟಕ್ಕೆ ಲಭ್ಯವಿದೆ. ಆದರೆ ಬೆಲೆ? ಬೆಚ್ಚಿ ಬೀಳದಿರಿ. 1289 ರೂಪಾಯಿ ಮಾತ್ರ, ಅದೂ ಒಂದು (ವಾಸ್ತವವಾಗಿ ಅರ್ಧ) ಚಿಪ್ಪಿಗೆ! ಸದ್ಯಕ್ಕೆ ಅದು ‘ಆಫರ್’ನಲ್ಲಿ ಲಭ್ಯವಿದೆ ಎಂದರೆ ನೀವು ನಂಬಲೇಬೇಕು.

ಮತ್ತೆ ಅದಕ್ಕೆ ಅಮೆಜಾನ್ ತಾಣದಲ್ಲಿ ಕೆಲವರು ರಿವ್ಯೂ ಮಾಡಿ, ರೇಟಿಂಗ್ ಕೂಡ ನೀಡಿದ್ದಾರೆ. “ನನಗೆ ಇದೇ ಬೇಕಿತ್ತು, ಹಾಲೋವೀನ್ ಕಾಸ್ಟ್ಯೂಮ್‌ಗೆ ಬೇಕಾಗಿರುವಂಥದ್ದೇ ಕೊನೆಗೂ ಸಿಕ್ಕಿತು” ಅಂತ ಒಬ್ಬರು ಖರೀದಿದಾರರು ಖುಷಿಯಿಂದ ಬರೆದುಕೊಂಡಿದ್ದರೆ, ‘ಇದು ತೋರಿಸಿದ ಗಾತ್ರದಷ್ಟು ದೊಡ್ಡದಾಗಿಲ್ಲ, ಚಿಕ್ಕದಾಯಿತು’ ಅಂತ ಕೊರಗಿದವರು ಮತ್ತೊಬ್ಬರು. ಆದರೆ, “ಈ ಬೆಲೆಗೆ ಅರ್ಧ ತೆಂಗಿನ ಕಾಯಿಯ ಚಿಪ್ಪು ನೀಡುವ ಬದಲು, ಎರಡು ಚಿಪ್ಪುಗಳನ್ನು (ಇಡೀ ತೆಂಗಿನಕಾಯಿಯದ್ದು) ನೀಡಿದರೆ ಒಳ್ಳೇದಿತ್ತು” ಅಂತ ಇನ್ನೊಬ್ಬರು ಬರೆದುಕೊಂಡಿದ್ದಾರೆ.

“ಈ ಕೆಲಸಕ್ಕೆ ಬಾರದ ಚಿಪ್ಪುಗಳನ್ನು ಯಾರು ಖರೀದಿ ಮಾಡುತ್ತಾರೋ, ಅವರನ್ನು ನೋಡಿದ್ರೆ ಪಾಪ ಅನಿಸ್ತಿದೆ” ಅಂತ ಒಬ್ಬರು ಬರೆದಿದ್ದಾರೆ. “15 ರೂಪಾಯಿ ಕೊಟ್ರೆ ಇಡೀ ತೆಂಗಿನಕಾಯಿಯೇ ಸಿಗುತ್ತದೆ. ಅಂಥದ್ದರಲ್ಲಿ, ನಿಮ್ಮಲ್ಲಿ ಹಣ ಜಾಸ್ತಿ ಇದೆಯೆಂದಾದರೆ, ಹೋಗಿ ಬಡವರಿಗೆ ಹಂಚಿಬಿಡಿ” ಅಂತನೂ ಇನ್ನೊಬ್ಬರು ಸಲಹೆ ಕೊಟ್ಟಿದ್ದಾರೆ. ಇನ್ನೊಬ್ಬರ ಪ್ರಕಾರ, ಸಾವಿರ ಬಿಡಿ, ಒಂದು ರೂಪಾಯಿಗೆ ಕೊಟ್ರೂ ಯಾರಿಗೂ ಇದು ಬೇಡ. ನೀರು ಕಾಯಿಸಲು ನಾವಿದನ್ನು ಮನೆಯಲ್ಲಿ ಉರಿಸುತ್ತೇವೆ ಅಂತ ಬರೆದಿದ್ದಾರೆ ಅವರು.  ಇದು Natural Coconut Shell Cup (ಪ್ರಾಕೃತಿಕವಾದ ತೆಂಗಿನ ಚಿಪ್ಪಿನ ಕಪ್) ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ ಮತ್ತು ಇತ್ತೀಚೆಗೆ ಇದು ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಕೂಡ ಆಗುತ್ತಿದೆ. ಅದರ ಬೆಲೆ ಮೊದಲು 3 ಸಾವಿರ ರೂ.ವರೆಗೂ ಇತ್ತು ಎಂದರೆ ಅಚ್ಚರಿಪಡಬಹುದು. ನ್ಯಾಚುರಲ್, ಆರ್ಗ್ಯಾನಿಕ್ ಹೆಸರಿನಲ್ಲಿ ವ್ಯಾಪಾರ ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆಗಳಲ್ಲಿ ಇದೂ ಒಂದು.

ಇದರಲ್ಲಿ ಡಿಸ್‌ಕ್ಲೇಮರ್ ಕೂಡ ಇದೆ. ಇದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ, ಇದರಲ್ಲಿ ಒಡೆತ, ಡೆಂಟ್‌ಗಳು ಮತ್ತು ಆಕಾರದಲ್ಲಿ ವ್ಯತ್ಯಾಸಗಳೂ ಕಾಣಿಸಬಹುದು ಅಂತ ಬರೆಯಲಾಗಿದೆ. ಅಲ್ಲದೆ, ವಾಟ್ಸ್ಆ್ಯಪ್, ಫೇಸ್‌ಬುಕ್‌ಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಟ್ರಾಲ್ ಆಗುತ್ತಿದ್ದು, ಕೆಲವರಂತೂ ತೆಂಗಿನ ಚಿಪ್ಪುಗಳುಳ್ಳ ಗೋಣಿಚೀಲದ ಫೋಟೋ ರವಾನಿಸಿ, ಇಷ್ಟು ಚಿಪ್ಪುಗಳಿಗೆ ಗೋಣಿಚೀಲ ಉಚಿತ ಎಂದು ಪೋಸ್ಟ್ ಮಾಡುತ್ದಿದ್ದಾರೆ.

ಇನ್ನು, ಟ್ವಿಟರ್‌ನಲ್ಲಂತೂ ಇದು ಸಾಕಷ್ಟು ಚರ್ಚೆಯ ಸಂಗತಿಯೇ. ಮೊದಲೇ ಗೊತ್ತಿದ್ದರೆ ಈಗಾಗಲೇ ಬಿಲಿಯಾಧಿಪತಿಯಾಗುತ್ತಿದ್ದೆ ಅಂತ ಒಬ್ಬರು ಚಿಂತೆ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment