ರಾಷ್ಟ್ರ ಸುದ್ದಿ

ತೆರಿಗೆ ಸಂಗ್ರಹ ಹೆಚ್ಚುತ್ತಿದ್ದಂತೆಯೇ ಜಿಎಸ್ ಟಿ ದರ ಗರಿಷ್ಠ 12-18ಕ್ಕೆ ನಿಗದಿ: ಅರುಣ್ ಜೇಟ್ಲಿ

ನವದೆಹಲಿ: ಜಿಎಸ್ ಟಿ ಜಾರಿಗೊಂಡ 18 ತಿಂಗಳಲ್ಲೇ  ಸರ್ಕಾರ ಐಷಾರಾಮಿ ವಸ್ತುಗಳನ್ನು ಶೇ.28 ರ ತೆರಿಗೆ ವ್ಯಾಪ್ತಿಗೆ ತರುವ ಮೂಲಕ  ಮೊದಲ ಹಂತದ ಸುಧಾರಣೆಗಳನ್ನು ಪೂರ್ಣಗೊಳಿಸುವ ಸನಿಹದಲ್ಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜಿಎಸ್ ಟಿ ಸುಧಾರಣೆಗಳ ಬಗ್ಗೆ ಫೇಸ್ ಬುಕ್ ನಲ್ಲಿ ಸುದೀರ್ಘವಾಗಿ ಲೇಖನ ಬರೆದಿರುವ ಜೇಟ್ಲಿ, ತೆರಿಗೆ ಸುಧಾರಣೆಗಳು ಹೆಚ್ಚುತ್ತಿದ್ದು, ಭಾರತದಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಸರಕುಗಳು 0-5 ಶೇ. ಹಾಗೂ 12-18 ಶೇ. ಜಿಎಸ್ ಟಿ ಸ್ಲ್ಯಾಬ್ ವ್ಯಾಪ್ತಿಗೆ ಬರಲಿವೆ ಎಂದು ಮಾಹಿತಿ ನೀಡಿದ್ದಾರೆ. ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕರವಾದ ಮತ್ತು ದುಶ್ಚಟ ಎಂದು ಪರಿಭಾವಿಸಲಾದ ಸರಕುಗಳು ಮಾತ್ರ ಹೆಚ್ಚಿನ ತೆರಿಗೆ ವ್ಯಾಪ್ತಿಗೆ ಬರಲಿದೆ. 1,216 ಸರಕುಗಳ ಪೈಕಿ 183 ಸರಕುಗಳಿಗೆ ಶೂನ್ಯ ತೆರಿಗೆ 308 ಕ್ಕೆ ಶೇ.5 ರಷ್ಟು ತೆರಿಗೆ, 178 ಕ್ಕೆ ಶೇ.12 ರಷ್ಟು ತೆರಿಗೆ, 517 ಕ್ಕೆ ಶೇ.18 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ.  ಮುಂದಿನ ದಿನಗಳಲ್ಲಿ 12-18 ತೆರಿಗೆ ನಡುವೆ ಹಂಚಿಹೋಗಿರುವ ಸರಕುಗಳನ್ನು ಒಂದೇ ಮಾದರಿಯ ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ.  ಅಂತಿಮವಾಗಿ ಭಾರತದಲ್ಲಿ ಸಮಾನ್ಯವಾಗಿ ಬಳಕೆ ಮಾಡುವ ಸರಕುಗಳ ತೆರಿಗೆ 0-5 ರಷ್ಟಿರಲಿದ್ದು, ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕರವಾದ ಮತ್ತು ದುಶ್ಚಟ ಎಂದು ಪರಿಭಾವಿಸಲಾದ ಸರಕುಗಳು ಒಂದು ನಿರ್ದಿಷ್ಟ ತೆರಿಗೆ ವ್ಯಾಪ್ತಿಗೆ ಒಳಪಡುವಂತೆ ಮಾಡಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.
ಸಿಮೆಂಟ್ ಮತ್ತೆ ಆಟೋಮೊಬೈಲ್ ಬಿಡಿಭಾಗಗಳು ಮಾತ್ರ ಶೇ.28 ರ ತೆರಿಗೆ ವ್ಯಾಪ್ತಿಯಲ್ಲಿ ಉಳಿದಿರುವ ಸಾಮಾನ್ಯವಾಗಿ ಬಳಕೆ ಮಾಡುವ ಸರಕುಗಳಾಗಿದ್ದು, ಸಿಮೆಂಟ್ ನ್ನು ಕಡಿಮೆ ಸ್ಲ್ಯಾಬ್ ಗೆ ಇಳಿಸುವುದು ಮುಂದಿನ ಆದ್ಯತೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಆರೋಪ ಮಾಡಿದ್ದು, ಭಾರತದ ಮೇಲೆ ಶೇ.31 ರಷ್ಟು ಪರೋಕ್ಷ ತೆರಿಗೆ ಹೇರಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.  ಜಿಎಸ್ ಟಿ ಕುರಿತಂತೆ ಸಾಕಷ್ಟು ಟೀಕೆ, ಅಪಪ್ರಚಾರ ನಡೆಯುತ್ತಿದೆ.  ಶೇ.31 ರಷ್ಟು ಪರೋಕ್ಷ ತೆರಿಗೆ ವಿಧಿಸಿದ್ದವರು ಹಾಗೂ ಜಿಎಸ್ ಟಿ ಯನ್ನು ಸತತವಾಗಿ ವಿರೋಧಿಸುತ್ತಿದ್ದವರು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಗೆ ಫೇಸ್ ಬುಕ್ ನಲ್ಲಿ ಜೇಟ್ಲಿ ಬರೆದಿದ್ದಾರೆ. 23 ಸರಕುಗಳ ತೆರಿಗೆಯನ್ನು ಕಡಿಮೆ ಮಾಡಿದ ಜಿ ಎಸ್ ಟಿ ಕೌನ್ಸಿಲ್ ಸಭೆಯ ಬೆನ್ನಲ್ಲೇ ಅರುಣ್ ಜೇಟ್ಲಿ ಫೇಸ್ ಬುಕ್ ನಲ್ಲಿ ಜಿಎಸ್ ಟಿ ಸುಧಾರಣೆಗಳ ಬಗ್ಗೆ ಬರೆದಿದ್ದಾರೆ. ಪರಿಷ್ಕೃತ ದರಗಳು ಜನವರಿ 1 ರಿಂದ ಜಾರಿಗೆ ಬರಲಿವೆ.

About the author

ಕನ್ನಡ ಟುಡೆ

Leave a Comment