ರಾಷ್ಟ್ರ ಸುದ್ದಿ

ತೆಲಂಗಾಣದಲ್ಲಿ ನಡೆಯದ ಟ್ರಬಲ್‌ ಶೂಟರ್‌ ಡಿಕೆಶಿ ಕಮಾಲ್‌

ಹೈದರಾಬಾದ್‌: ಕಾಂಗ್ರೆಸ್‌ ಪಕ್ಷದ ಟ್ರಬಲ್‌ ಶೂಟರ್‌ ಎಂದೇ ಖ್ಯಾತಿ ಪಡೆದುಕೊಂಡಿದ್ದ ಕರ್ನಾಟಕ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಆಟ ಈ ಬಾರಿ ಕೈ ಕೊಟ್ಟಿದೆ.

ತೆಲಂಗಾಣದಲ್ಲಿ ಶತಾಯ ಗತಾಯ ಮಹಾ ಮೈತ್ರಿ ಕೂಟಕ್ಕೆ ಗೆಲುವು ದಕ್ಕಿಸಿಕೊಡಬೇಕೆಂಬ ಏಕೈಕ ಗುರಿಯೊಂದಿಗೆ ಡಿಕೆ ಶಿವಕುಮಾರ್‌ಗೆ ತೆಲಂಗಾಣ ಜವಾಬ್ದಾರಿಯನ್ನು ಕಾಂಗ್ರೆಸ್‌ ಹೈ ಕಮಾಂಡ್‌ ಕೊಟ್ಟಿತ್ತು. ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ಗೆ ಡಿಕೆಶಿ ಮೇಲೆ ಸಾಕಷ್ಟು ನಿರೀಕ್ಷೆಯೂ ಇತ್ತು.

ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಡಿಕೆಶಿ ತಂತ್ರ ಹೂಡಿ ಪಕ್ಷಕ್ಕೆ ಅಧಿಕಾರ ದಕ್ಕಿಸಿಕೊಡಬಹುದು ಎಂಬ ನಿರೀಕ್ಷೆಯೂ ಕಾಂಗ್ರೆಸ್‌ ಹೈಕಮಾಂಡ್‌ಗೆ ಇತ್ತು. ಆದರೆ ಈಗ ಅದು ಠುಸ್‌ ಆಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ವಲಯದ ಪ್ರಭಾವಿ ನಾಯಕ, ಸೋನಿಯಾ ಗಾಂಧಿ ರಾಜಕೀಯ ಸಲಗೆಗಾರ ಅಹ್ಮದ್‌ ಪಟೇಲ್‌ ಸೂಚನೆ ಮೇರೆಗೆ ತೆಲಂಗಾಣದಲ್ಲಿ ಡಿಕೆಶಿ ಅವರನ್ನು ಅಖಾಡಕ್ಕಿಳಿಸಲಾಗಿತ್ತು.

ಒಂದು ವಾರಕ್ಕೂ ಹೆಚ್ಚು ಕಾಲ ಡಿಕೆಶಿ ತೆಲಂಗಾಣದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಒಂದೆರಡು ಸಮೀಕ್ಷೆಯಲ್ಲಿ ಕೈ ಮೈತ್ರಿಕೂಟಕ್ಕೆ ಮುನ್ನಡೆ ಕೂಡ ಸಿಕ್ಕಿತ್ತು. ಆದರೆ ಕೆ. ಚಂದ್ರಶೇಖರ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಎಲ್ಲ ಸಮೀಕ್ಷೆಗಳನ್ನು ಬುಡಮೇಲು ಮಾಡಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ.

ತೆಲಂಗಾಣದಲ್ಲಿ ಟಿಆರ್‌ಎಸ್ ಸರಕಾರ ಮತ್ತೆ ರಚನೆಯಾಗಲಿದೆ. 119 ವಿಧಾನಸಭೆ ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಟಿಆರ್‌ಎಸ್ 80ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದು ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.

About the author

ಕನ್ನಡ ಟುಡೆ

Leave a Comment