ರಾಜಕೀಯ ರಾಷ್ಟ್ರ

ತ್ರಿಪುರದಲ್ಲಿ ಎಡ ಪಕ್ಷಗಳಿಗೆ ಜನರು ತಕ್ಕ ಉತ್ತರವನ್ನೇ ನೀಡಿದ್ದಾರೆ: ಮೋದಿ

ನವದೆಹಲಿ: ತ್ರಿಪುರಾ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಗೆಲುವಿನ ನಂತರ ದೆಹಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷಕ್ಕೆ ತಂದುಕೊಟ್ಟ ಅಭೂತಪೂರ್ವ ಗೆಲುವಿಗಾಗಿ ಅಭಿನಂದಿಸಿದರು. ಕೇಂದ್ರ ಚುನಾವಣಾ ಆಯೋಗಕ್ಕೂ ಮೋದಿ ಅಭಿನಂದನೆ ಸಲ್ಲಿಸಿದರು.

ಹಲವು ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತ್ರಿಪುರದಲ್ಲಿ ಭಯ ಮತ್ತು ಭ್ರಮೆಯನ್ನು ಹರಡಲು ಯತ್ನಿಸಿದ ಎಡ ಪಕ್ಷಗಳಿಗೆ ಜನರು ತಕ್ಕ ಉತ್ತರವನ್ನೇ ನೀಡಿದ್ದಾರೆ. ಎಡಕ್ಕೆ ತಕ್ಕ ಸೋಲಾಗಿದೆ ಎಂದರು.

ಚುನಾವಣೆಯಲ್ಲಿ ಗೆಲುವು ಮತ್ತು ಸೋಲು ಪ್ರಜಾಪ್ರಭುತ್ವದ ಒಂದು ಭಾಗ. ಅದೇ ಪ್ರಜಾಪ್ರಭುತ್ವದ ಸೌಂದರ್ಯ ಕೂಡ. ಯಾರಾದರೂ ಒಬ್ಬರು ತಮ್ಮ ಸೋಲನ್ನು ಕ್ರೀಡಾ ಸ್ಫೂರ್ತಿಯೊಂದಿಗೆ ಒಪ್ಪಿಕೊಳ್ಳಲೇಬೇಕು. ಈಶಾನ್ಯ ರಾಜ್ಯಗಳಿಗೂ ಕೇಸರಿ ತನ್ನ ಬಾಹುವನ್ನು ಚಾಚಿದೆ. ಸೂರ್ಯ ಮುಳುಗುವಾಗಲೂ ಕೂಡ ಕೆಂಪಾಗಿರುತ್ತಾನೆ. 25 ವರ್ಷಗಳ ಎಡರಂಗದ ಆಡಳಿತಕ್ಕೆ ಕೊನೆ ಸಿಕ್ಕಿದೆ ಎಂದು ಹೇಳಿದರು.

ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ರಾಜ್ಯಗಳು ಅತ್ಯಂತ ಮುಖ್ಯವಾದ ಮತ್ತು ಮಂಗಳಕರ ಸ್ಥಳಗಳಾಗಿವೆ. ನಮ್ಮ ಅಭಿವೃದ್ಧಿ ಪರ ಪಯಣಕ್ಕೆ ಈಗ ಈಶಾನ್ಯ ರಾಜ್ಯಗಳು ಒಳಪಡುತ್ತಿರುವುದರಿಂದ ನನಗೆ ಸಂತೋಷವಾಗಿದೆ. ಈಶಾನ್ಯ ಭಾಗಗಳ ಕಾಳಜಿ ವಹಿಸಿ ದೇಶದ ಅಭಿವೃದ್ಧಿಗೆ ಅಡಿಪಾಯವಾಗಿ ಮಾರ್ಪಟ್ಟಿದೆ ಎಂದರು.

ಇದೇ ವೇಳೆ ಹತ್ತಿರದ ಮಸೀದಿಯಿಂದ ಮುಸ್ಲಿಂ ಪ್ರಾರ್ಥನೆ ಆರಂಭವಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಷಣವನ್ನು ಎರಡು ನಿಮಿಷಗಳ ಕಾಲ ಸ್ಥಗಿತಗೊಳಿಸಿ ಗೌರವ ಸೂಚಿಸಿದರು.

About the author

ಕನ್ನಡ ಟುಡೆ

Leave a Comment