ದೇಶ ವಿದೇಶ

ತ್ರಿವಳಿ ತಲಾಕ್‌; ಮುಸ್ಲಿಮರ ಮೂಲಭೂತ ಹಕ್ಕು ಉಲ್ಲಂಘನೆ: ಅಸಾದುದ್ದೀನ್‌ ಓವೈಸಿ ಆಕ್ರೋಶ

ಹೊಸದಿಲ್ಲಿ : ತ್ರಿವಳಿ ತಲಾಕ್‌ ಆಧ್ಯಾದೇಶ ಹೊರಡಿಸುವ ಮೂಲಕ ಕೇಂದ್ರ ಸರಕಾರ ಮುಸ್ಲಿಮರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಎಐಎಂಐಎಂ ಮುಖ್ಯಸ್ಥರಾಗಿರುವ ಹೈದರಾಬಾದಿನ ಉರಿ ನಾಲಗೆಯ ಸಂಸದ, ಅಸಾದುದ್ದೀನ್‌ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ತ್ರಿವಳಿ ತಲಾಕ್‌ ಹಕ್ಕನ್ನು ನಿಷೇಧಿಸಿ ಶಿಕ್ಷಾರ್ಹಗೊಳಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧ್ಯಾದೇಶವು ಇಸ್ಲಾಮಿಕ್‌ ಶರೀಯತ್‌ ಕಾನೂನಿಗೆ ವಿರುದ್ಧವಾಗಿದೆ. ಕೇಂದ್ರ ಸರಕಾರದ ಈ ಕ್ರಮವು ಮುಸ್ಲಿಮರ ಮಹಿಳೆಯರಿಗೆ ಕೂಡ ಅನ್ಯಾಯ ಮಾಡಿದೆ ಎಂದು ಓವೈಸಿ ಟೀಕಿಸಿದ್ದಾರೆ.

ಮೇಲಾಗಿ ಸುಪ್ರೀಂ ಕೋಟ್‌ ಕೂಡ ತನ್ನ ತೀರ್ಪಿನಲ್ಲಿ ಎಲ್ಲಿಯೂ ತ್ರಿವಳಿ ತಲಾಕ್‌ ಸಂವಿಧಾನಕ್ಕೆ ವಿರುದ್ದವಾದುದೆಂದು ಹೇಳಿಲ್ಲ. ಆದರೆ ಕೇಂದ್ರ ಸರಕಾರ ಹೊರಡಿಸಿರುವ ಅಧ್ಯದೇಶದಲ್ಲಿ ತ್ರಿವಳಿ ತಲಾಕ್‌ ಅಸಾಂವಿಧಾನಿಕ ಎಂದು ಹೇಳಿದೆ ಎಂದು ಓವೈಸಿ ಟೀಕಿಸಿದರು.

ಹೈದರಾಬಾದ್‌ನಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಓವೈಸಿ ಅವರು ಕೇಂದ್ರ ಸರಕಾರದ ವಿರುದ್ಧದ ತಮ್ಮ ವಾಕ್‌ ದಾಳಿಯನ್ನು ಮುಂದುವರಿಸಿ ತ್ರಿವಳಿ ತಲಾಕ್‌ ಸಂತ್ರಸ್ತ  ಮುಸ್ಲಿಂ ಮಹಿಳೆಯು ತನ್ನ ಪತಿ ತನಗೆ ತ್ರಿವಳಿ ತಲಾಕ್‌ ನೀಡಿರುವುದನ್ನು ಕೋರ್ಟಿನಲ್ಲಿ ಸಾಬೀತು ಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾಳೆ; ಇದರಿಂದ ಅವಳಿಗೆ ಕಾನೂನು ಸಂಕಷ್ಟಗಳು ಎದುರಾಗಿ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು ಕೂಡ ಕಾಡಲಿವೆ ಎಂದು ಓವೈಸಿ ಹೇಳಿದರು.

 

About the author

ಕನ್ನಡ ಟುಡೆ

Leave a Comment