ರಾಷ್ಟ್ರ ಸುದ್ದಿ

ತ.ನಾಡು ಉಪಚುನಾವಣೆಗೂ ಮೊದಲೇ ‘ನ್ಯೂಸ್ ಜೆ’ ಸುದ್ದಿವಾಹಿನಿಗೆ ಚಾಲನೆ ನೀಡಿದ ಎಐಎಡಿಎಂಕೆ

ಚೆನ್ನೈ: ತಮಿಳುನಾಡು ಉಪ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಅತ್ತ ಆಡಳಿತಾ ರೂಢ ಎಐಎಡಿಎಂಕೆ ಪಕ್ಷ ‘ನ್ಯೂಸ್ ಜೆ’ ಸುದ್ದಿವಾಹಿನಿಗೆ ಚಾಲನೆ ನೀಡಿದೆ.
ಎಐಎಡಿಎಂಕೆ ಪಕ್ಷದ ಅಜೆಂಡಾವನ್ನು ಹೊಂದಿರುವ ನ್ಯೂಸ್ ಜೆ 24 ಗಂಟೆಗಳ ಸುದ್ದಿವಾಹಿನಿಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಚಾಲನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ತಮಿಳುನಾಡಿನಲ್ಲಿ 20 ವಿಘಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದ್ದು, ಈ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರಿನಲ್ಲಿ 24 ಗಂಟೆಗಳ ಸುದ್ದಿವಾಹಿನಿಗೆ ಎಐಎಡಿಎಂಕೆ ಚಾಲನೆ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಇನ್ನು ಇಲ್ಲಿಯವರೆಗೂ ಜಯಾ ಟಿವಿ ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿತ್ತಾದರೂ, ಶಶಿಕಲಾ ಮತ್ತು ಅವರ ತಂಡವನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಜಯಾ ಟಿವಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಹೀಗಾಗಿ ಎಐಎಡಿಎಂಕೆ ತನ್ನದೇ ಆದ ಸುದ್ದಿವಾಹಿನಿ ತರಲು ಮುಂದಾಗಿತ್ತು. ಇದೀಗ ಅದು ಸಾಕಾರವಾಗಿದ್ದು, ನ್ಯೂಸ್ ಜೆ ಸುದ್ದಿವಾಹಿನಿ ತಲೆ ಎತ್ತಿದೆ.
ಈಗಾಗಲೇ ತಮಿಳುನಾಡಿನಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಆದ ವಾಹಿನಿಗಳನ್ನು ಹೊಂದಿದ್ದು, ಸನ್ ಟಿವಿ, ಕಲೈನರ್ ಟಿವಿ ಡಿಎಂಕೆ ಪಕ್ಷದ ಪರವಾಗಿದ್ದು, ಕ್ಯಾಪ್ಟನ್ ಟಿವಿ ನಟ ಹಾಗೂ ರಾಜಕಾರಣಿ ವಿಜಯ್ ಕಾಂತ್ ಅವರ ಡಿಎಂಡಿಕೆ ಪಕ್ಷದ ಪರವಾಗಿದೆ. ಅಂತೆಯೇ ಮಕ್ಕಳ್ ಟಿವಿ ಪಿಎಂಕೆ ಪಕ್ಷದ ಅಜೆಂಡಾ ಹೊಂದಿದ್ದು, ವಸಂತ್ ಟಿವಿ, ಮೆಗಾ ಟಿವಿ ಕಾಂಗ್ರೆಸ್ ಪಕ್ಷದ ಪರ ಒಲವು ಹೊಂದಿವೆ. ಇದೀಗ ಎಐಎಡಿಎಂಕೆ ಪಕ್ಷದ ಪರವಾಗಿ ನ್ಯೂಸ್ ಜೆ ತಲೆ ಎತ್ತಿದೆ.

About the author

ಕನ್ನಡ ಟುಡೆ

Leave a Comment