ರಾಜ್ಯ ಸುದ್ದಿ

ದಕ್ಷಿಣಕ್ಕೆ ಅಣ್ಣಾಮಲೈ, ಪಶ್ಚಿಮಕ್ಕೆ ಚನ್ನಣ್ಣನವರ್​; ರೌಡಿಗಳ ಬೆವರಿಳಿಸಲಿದ್ದಾರಾ ಸಿಂಗಂಗಳು

ಬೆಂಗಳೂರು : ಕರ್ನಾಟಕ ಪೊಲೀಸ್​ ಇಲಾಖೆಯಲ್ಲಿ ಸಿಂಗಂಗಳೆಂದೇ ಖ್ಯಾತಿ ಪಡೆದಿರುವವರು ಐಪಿಎಸ್​ ಅಧಿಕಾರಿಗಳಾದ ರವಿಚನ್ನಣ್ಣನವರ್​ ಹಾಗೂ ಅಣ್ಣಾಮಲೈ. ಜಿಲ್ಲಾ ಕೇಂದ್ರಗಳಲ್ಲಿ ತಮ್ಮದೇ ಖಡಕ್​ ಆದ ಆಡಳಿತದ ಮೂಲಕ ಖ್ಯಾತಿ ಹೊಂದಿರುವ ಈ ಇಬ್ಬರು ಪೊಲೀಸ್​ ಅಧಿಕಾರಿಗಳು ರಾಜ್ಯಾದ್ಯಾಂತ ಸದ್ದು ಮಾಡಿದ್ಧಾರೆ. ಎಲ್ಲೇ ಪೋಸ್ಟಿಂಗ್​ ಹಾಕಿದರೂ ಅಲ್ಲೆಲ್ಲಾ ರೌಡಿಗಳನ್ನು, ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿಕಟ್ಟಿರುವ ಹೆಗ್ಗಳಿಕೆ ಇವರದ್ದು. ಈ ಇಬ್ಬರು ಅಧಿಕಾರಿಗಳು ಈಗ ರಾಜಧಾನಿ ಬೆಂಗಳೂರಿನಲ್ಲಿ ಪೋಸ್ಟಿಂಗ್​ ಪಡೆದುಕೊಂಡಿದ್ದಾರೆ. ಈ ಹಿಂದೆಯೇ ರವಿ ಚನ್ನಣ್ಣನವರ್​ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನಿಂದ ಅಣ್ಣಾಮಲೈ ಕೂಡ ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಾಗಿರುವ ಭೂ ಮಾಫಿಯಾ, ರೌಡಿಗಳ ಹಾವಳಿಯನ್ನು ತಡೆಯಲು ಮುಂದಾಗಿರುವ ಮೈತ್ರಿ ಸರ್ಕಾರ ಖಡಕ್​ ಅಧಿಕಾರಿಗಳನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲು ನಿರ್ಧರಿಸಿತ್ತು. ಈ ಹಿಂದೆ ನಿರ್ಭೀತಿಯಿಂದ ಆಡಳಿತ ನೀಡುವ ಮೂಲಕ ಚಿಕ್ಕಮಗಳೂರಿನಲ್ಲಿ ಹೆಸರು ಗಳಿಸಿದ್ದ ಅಣ್ಣಾ ಮಲೈ ಅವರನ್ನು ದಕ್ಷಿಣದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ವಿಭಾಗ ಡಿಸಿಪಿಯಾಗಿ ಎಸ್​.ಡಿ. ಶರಣಪ್ಪ ಅವರಿಂದ ಅಧಿಕಾರ ದಂಡವನ್ನು ಅಣ್ಣಾಮಲೈ ಇಂದು ಪಡೆದರು. ಇನ್ನು ಮೈಸೂರು, ದಾವಣಗೆರೆ, ಶಿವಮೊಗ್ಗದಲ್ಲಿ  ಸೇವೆ ಸಲ್ಲಿಸಿರುವ ‘ಕರುನಾಡ ಸಿಂಗಂ’ ಎಂದೇ ಹೆಸರಾಗಿರುವ  ರವಿ ಚನ್ನಣ್ಣನವರ್​ ಕೂಡ ಈಗಾಗಲೇ ಪಶ್ಚಿಮ ವಿಭಾಗದ ಡಿಸಿಪಿಯಾಗಿ ಅಧಿಕಾರವಹಿಸಿಕೊಂಡು ಮೆಜೆಸ್ಟಿಕ್​ ಸುತ್ತಮುತ್ತ ರೌಡಿಗಳಲ್ಲಿ ಭಯ ಹುಟ್ಟಿಸಿದ್ದಾರೆ. ಯುವಜನತೆಗೆ ಆದರ್ಶದ ಜೊತೆ ನಿರ್ಭಿತ ಆಡಳಿತದ ಮೂಲಕ ಇಬ್ಬರು ಅಧಿಕಾರಿಗಳು ಕೂಡ ಹೆಸರು ಮಾಡಿದ್ದು, ಇಬ್ಬರು ಕೂಡ ಕರುನಾಡ ಸಿಂಗಂ ಎಂಬ ಹೆಸರಿಗೆ ಪಾತ್ರರಾಗಿದ್ಧಾರೆ.

 

About the author

ಕನ್ನಡ ಟುಡೆ

Leave a Comment