ಸಿನಿ ಸಮಾಚಾರ

ದರ್ಶನ್, ಯಶ್ ಪ್ರಚಾರದ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಬುದ್ಧಿವಂತಿಕೆ ಉತ್ತರ

ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ  ಅವರು ಮಂಡ್ಯ ರಾಜಕೀಯದ ಬಗ್ಗೆ ಒಂದು ಟ್ವೀಟ್ ಮಾಡಿದ್ದರು. “ರಾಜಕೀಯದವರು ಮಂಡ್ಯಕ್ಕಾಗಿ ಹೊಡೆದಾಡುತ್ತಿದ್ದಾರೆ…..
ಪ್ರಜಾಕೀಯದವರು ( India ) ಇಂಡ್ಯಕ್ಕಾಗಿ ಹೊಡೆದಾಡುತ್ತಿದ್ದಾರೆ” ಎಂದು. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್  ದರ್ಶನ್ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಆರಂಭಿಸಿರುವುದು ಇನ್ನೊಂದಿಷ್ಟು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಸುಮಲತಾ ಪರ ದರ್ಶನ್ ಮತ್ತು ಯಶ್ ಪ್ರಚಾರ ಮಾಡುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ನಟ ಕಮ್ ರಾಜಕಾರಣಿ ಉಪೇಂದ್ರ ಅವರು ತಮ್ಮದೇ ಶೈಲಿಯಲ್ಲಿ ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ. ಎಷ್ಟೇ ಆಗಲಿ ‘ಬುದ್ಧಿವಂತ’ ನಟ ಅಲ್ಲವೇ ಉಪ್ಪಿ?

ಸದ್ಯಕ್ಕೆ ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷದ ಪ್ರಚಾರ ಆರಂಭಿಸಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ರಾಜಕೀಯ ಡ್ರಾಮಾ ಬಗ್ಗೆ ಉಪ್ಪಿ ಅವರನ್ನು ಪ್ರಶ್ನಿಸಲಾಗಿ, “ಚುನಾವಣೆ ಕೇವಲ ಮಂಡ್ಯದಲ್ಲಿ ಮಾತ್ರ ನಡೆಯುತ್ತಿಲ್ಲ, ದೇಶಾದಾದ್ಯಂತ ನಡೆಯುತ್ತಿದೆ” ಎಂದಿದ್ದಾರೆ. ಈ ಮೂಲಕ ಮಂಡ್ಯ ರಾಜಕೀಯದ ಬಗ್ಗೆ ಅವರು ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.

ಉತ್ತಮ ಪ್ರಜಾಕೀಯ ಪಕ್ಷ ಮಂಡ್ಯದಲ್ಲೂ ಸ್ಪರ್ಧಿಸುತ್ತಿದೆ. ಯಶ್ ಮತ್ತು ದರ್ಶನ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಏನಂತೀರಾ ಎಂದರೆ, “ಎಲ್ಲಿ ಅಭಿವೃದ್ಧಿಗೆ ಅವಕಾಶ ಇದೆಯೋ ಅಲ್ಲೇ ಕೆಲವೊಂದು ವಿಚಾರಗಳನ್ನು ಚರ್ಚಿಸಬೇಕು. ನಾವು ಚರ್ಚಿಸಬೇಕಾದಂತಹವು ಇನ್ನೂ ಸಾಕಷ್ಟಿವೆ” ಎಂದು ಹೇಳಿ ಅನಗತ್ಯ ವಿವಾದ ಯಾಕೆಂದು ಫುಲ್‌ಸ್ಟಾಪ್ ಹಾಕಿದ್ದಾರೆ ಉಪೇಂದ್ರ.

ಉಪೇಂದ್ರ ಅವರು ನೇರವಾಗಿ ಅಂಬರೀಶ್ ಅಥವಾ ಕುಮಾರಸ್ವಾಮಿ ಕುಟುಂಬದ ಬಗ್ಗೆ ಏನೂ ಹೇಳದೆ ತುಂಬಾ ಡಿಪ್ಲೊಮ್ಯಾಟಿಕ್ ಆಗಿ ಮಾತನಾಡಿರುವುದು ಅವರ ಅಭಿಮಾನಿಗಳಿಗಷ್ಟೇ ಅಲ್ಲ ಬೇರೆಯವರೂ ತಲೆದೂಗುವಂತೆ ಮಾಡಿದೆ. ಈ ಸಲದ ಲೋಕಸಭೆ ಚುನಾವಣೆಗೆ ಉಪೇಂದ್ರ ಸ್ಪರ್ಧಿಸದಿದ್ದರೂ ತಮ್ಮ ಪಕ್ಷದ ಪ್ರಚಾರ ಕಾರ್ಯವನ್ನು ಇಂದಿನಿಂದ (ಏಪ್ರಿಲ್ 1) ಆರಂಭಿಸಿದ್ದಾರೆ.

About the author

ಕನ್ನಡ ಟುಡೆ

Leave a Comment