ರಾಷ್ಟ್ರ ಸುದ್ದಿ

ದಲಿತ ಆಯ್ತು, ಮತ್ತೀಗ ಬುಡಕಟ್ಟಿನವ : ಶುರುವಾಗಿದೆ ದೇವ ಹನುಮಂತನ ಜಾತಿ ಚರ್ಚೆ

ಹೊಸದಿಲ್ಲಿ: ಹನುಮಂತ ದಲಿತ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಹೇಳಿದ ಬೆನ್ನಲ್ಲೇ, ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ (NCST)  ಅಧ್ಯಕ್ಷ ನಂದಕುಮಾರ್ ಸಾಯಿ ಒಂದು ಹೆಜ್ಜೆ ಮೇಲೆ ಹೋಗಿ ಹನುಮಾನ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು, ಅದಕ್ಕೆ ಪೂರಕವಾದ ಸಾಕ್ಷಿಗಳಿವೆ ಎಂದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬುಡಕಟ್ಟು ಸಮಾಜದಲ್ಲಿ ಹನುಮಾನ ಎಂದು ಗೋತ್ರವಿದ್ದು, ಈ ಜಾತಿಯ ಜನರು ಶ್ರೀರಾಮ, ವಾನರ ಸೈನ್ಯ ಕಟ್ಟಿದ ದಂಡಕಾರಣ್ಯದಲ್ಲಿ ಕಂಡುಬರುತ್ತಾರೆ. ಇದೇ ಹನುಮಂತ ನಮ್ಮ ಸಮುದಾಯಕ್ಕೆ ಸೇರಿದವರು ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಹೇಳಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಹನುಮಂತ ಒಬ್ಬ ಅರಣ್ಯವಾಸಿ. ಎಲ್ಲ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ’ ಎಂದಿದ್ದರು.

ಅವರ ಈ ಹೇಳಿಕೆಗೆ ಪಕ್ಷದಿಂದಲೇ ಆಕ್ಷೇಪ ವ್ಯಕ್ತವಾಗಿದ್ದು, ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ದೇವರನ್ನು ಜಾತಿಯ ಜತೆ ಬೆರೆಸುವುದು ಸೂಕ್ತವಲ್ಲ. ಜಾತಿ-ಧರ್ಮಕ್ಕಿಂತ ದೊಡ್ಡವರಾಗಿರುವ ದೇವಾನುದೇವತೆಗಳನ್ನು, ಒಂದು ಜಾತಿಗೆ ಸಿಮೀತಗೊಳಿಸುವುದು ಸೂಕ್ತವಲ್ಲ ಎಂದು ಹೇಳಿದ್ದರು. ಹನುಮಾನ್ ದಲಿತನೆಂದು ಹೇಳಿರುವ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ ನೋಟಿಸ್ ಜಾರಿಗೊಳಿಸಿದ್ದು, 3 ದಿನಗಳ ಒಳಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

About the author

ಕನ್ನಡ ಟುಡೆ

Leave a Comment