ರಾಜಕೀಯ

ದಾವಣಗೆರೆ ಲೋಕಸಭೆ ಕ್ಷೇತ್ರ; ಶಾಮನೂರು ಶಿವಶಂಕರಪ್ಪ ಪುತ್ರನನ್ನು ಕಾಂಗ್ರೆಸ್ ಕಣಕ್ಕಿಳಿಸುವ ಸಾಧ್ಯತೆ

ಬೆಂಗಳೂರು: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸುವ ಸಾಧ್ಯತೆಯಿದೆ. ಶಾಮನೂರು ಶಿವಶಂಕರಪ್ಪನವರು ಇದೀಗ ತಮ್ಮ ಮಗ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ದಾವಣಗೆರೆ ಕ್ಷೇತ್ರದಿಂದ 87 ವರ್ಷದ ಶಾಮನೂರು ಶಿವಶಂಕರಪ್ಪ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಕೊಟ್ಟಾಗ ಅಚ್ಚರಿಯಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅವರ ಮಗ ಮಲ್ಲಿಕಾರ್ಜುನ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಕೂಡ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ತಮಗೆ ವಯಸ್ಸಾಯಿತು, ಪ್ರಚಾರದಲ್ಲಿ ತೊಡಗಲು ಸಾಧ್ಯವಿಲ್ಲ, ಬೇರೆ ಯಾರಿಗಾದರೂ ಈ ಬಾರಿ ಕೊಡಿ ಎಂದು ಹಿಂದೆ ಶಾಮನೂರು ಶಿವಶಂಕರಪ್ಪ ರಾಜ್ಯ ನಾಯಕರಿಗೆ ಹೇಳಿದ್ದರು. ಆದರೆ ಇದೀಗ ಅವರು ತಮ್ಮ ಬದಲು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ನಾಯಕರ ಹಿಂದೆ ದುಂಬಾಲು ಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಪಕ್ಷ ಸಭೆ ಕರೆದಿದೆ ಎನ್ನಲಾಗಿದೆ. ಶಾಮನೂರು ಸೂಚಿಸಿದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆಯಿದ್ದು ಅವರು ತಮ್ಮ ಪುತ್ರನ ಹೆಸರು ಸೂಚಿಸುವ ಸಾಧ್ಯತೆ ಹೆಚ್ಚಾಗಿದೆ. ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ನಿರ್ಧಾರ ತೆಗೆದುಕೊಂಡಿದ್ದಾಗ ಶಾಮನೂರು ಅವರು ಅದನ್ನು ಬಲವಾಗಿ ಖಂಡಿಸಿದ್ದರು. 2014ರಲ್ಲಿ ಇದರಿಂದಾಗಿ ಕಾಂಗ್ರೆಸ್ ಗೆ ಹೊಡೆತ ಬಿದ್ದು ಲಿಂಗಾಯತ ಮತಗಳು ಬಿಜೆಪಿಗೆ ಹೋಗಿದ್ದವು ಎನ್ನಲಾಗುತ್ತಿದೆ. ಈ ಬಾರಿ ಶಾಮನೂರು ಅಥವಾ ಅವರ ಮಗನನ್ನು ಕಣಕ್ಕಿಳಿಸಿದರೆ ಲಿಂಗಾಯತರ ಬೆಂಬಲ ಸಿಗಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ನದ್ದು. ಹೀಗಾಗಿ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆಯಿದೆ. ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶಿವರ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರಿಗೆ ಸಹ ಈ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇತ್ತು. ಜಿಲ್ಲೆಯ ಕುರುಬ ಸಮುದಾಯದ ಜೊತೆ ಸಭೆ ನಡೆಸಿದ್ದರು. ರಾಜ್ಯದ ಎರಡನೇ ಹಂತದ 14 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಕಾರ್ಯ ಇಂದಿನಿಂದ ಆರಂಭವಾಗಲಿದೆ.

About the author

ಕನ್ನಡ ಟುಡೆ

Leave a Comment