ರಾಷ್ಟ್ರ ಸುದ್ದಿ

ದುಧಿ ರೈಲ್ವೆ ನಿಲ್ದಾಣದ ಸಮೀಪ ಶಾಲಾ ವಾಹನಕ್ಕೆ ರೈಲು ಢಿಕ್ಕಿಯಾಗಿ 13 ಮಕ್ಕಳ ದುರ್ಮರಣ

ಲಖನೌ : ಮಾನವ ರಹಿತ ರೈಲ್ವೇ ಕ್ರಾಸಿಂಗ್‌ನಲ್ಲಿ  ರೈಲೊಂದು ಢಿಕ್ಕಿಯಾಗಿ  13 ಶಾಲಾ ಮಕ್ಕಳು ದಾರುಣವಾಗಿ ಸಾವನ್ನಪ್ಪಿ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಉತ್ತರಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ನಡೆದಿದೆ.

ವರದಿಯಾದಂತೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವೇಳೆ ವೇಗವಾಗಿ ಬಂದ ರೈಲು ಢಿಕ್ಕಿಯಾಗಿದ್ದು ಸ್ಥಳದಲ್ಲೇ ಹಲವು ಮಕ್ಕಳು ಸಾವನ್ನಪ್ಪಿದ್ದಾರೆ. ಢಿಕ್ಕಿಯ ರಭಸಕ್ಕೆ ವಾಹನ ನಜ್ಜುಗುಜ್ಜಾಗಿದೆ. ಕೆಲ ಮಕ್ಕಳು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತವಾದೊಡನೆ ಸ್ಥಳೀಯರು ನೂರಾರು ಮಂದಿ ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರು. ವಾಹನದಲ್ಲಿ 25 ಮಂದಿ  ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದ್ದು, ಹೆಚ್ಚಿನವರು 10 ವರ್ಷದ ಒಳಗಿನವರು ಎಂದು ಹೇಳಲಾಗಿದೆ. ಗಾಯಗೊಂಡಿರುವ ಹಲವು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ಮುಖ್ಯಮಂತ್ರಿ ಸಂತಾಪ: ದುರ್ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಕುಟುಂಬದವರಿಗೆ  2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಘಟನೆಯ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment