ರಾಷ್ಟ್ರ ಸುದ್ದಿ

ದೆಹಲಿ ಪೊಲೀಸ್ ಪ್ರಧಾನ ಕಚೇರಿ, ಆರ್ ಎಸ್ ಎಸ್ ಕಚೇರಿ ಉಗ್ರರ ಟಾರ್ಗೆಟ್

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಂಧಿತರಾದ 10 ಜನ ಶಂಕಿತ ಉಗ್ರರು ಗಣರಾಜ್ಯೋತ್ಸವದ ದಿನದಂದು ದೆಹಲಿ ಪೊಲೀಸ್ ಪ್ರಧಾನ ಕಚೇರಿ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿರುವ ಆರ್ ಎಸ್ ಎಸ್ ಪ್ರಧಾನ ಕಚೇರಿ ಮೇಲೆ ಭಾರಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಲಭ್ಯವಾಗಿದೆ.
ನಿನ್ನೆ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದ್ದ ಎನ್ ಐಎ ಅಧಿಕಾರಿಗಳು 17 ಕಡೆಗಳಲ್ಲಿ ದಾಳಿ ನಡೆಸಿ 10 ಜನ ಶಂಕಿತ ಉಗ್ರರನ್ನು ಬಂಧಿಸಿದ್ದರು. ಅಲ್ಲದೆ ಶಂಕಿತರಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಬಂಧಿತ ಶಂಕಿತರ ವಿಚಾರಣೆ ರಹಸ್ಯ ಪ್ರದೇಶದಲ್ಲಿ ನಡೆಯುತ್ತಿದ್ದು, ಬಂಧಿತರು ತಮ್ಮ ಸಂಚಿನ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಐಸಿಸ್‌ ಪ್ರೇರಿತರಾದ ಈ ಶಂಕಿತ ಉಗ್ರರು ಭಾರತದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ಉಗ್ರಕೃತ್ಯ ನಡೆಸಲು ಅಣಿಯಾಗುತ್ತಿದ್ದರು ಮತ್ತು ಪ್ರಮುಖ ರಾಜಕಾರಣಿಗಳ ಹತ್ಯೆಗೆ ಯೋಜನೆ ರೂಪಿಸಿಕೊಂಡಿದ್ದರು ಎಂಬುದು ಎನ್‌ಐಎ ಪ್ರಾಥಮಿಕ ತನಿಖೆಯಿಮದ ತಿಳಿದುಬಂದಿದೆ ಎಂದು ಎನ್‌ಐಎ ಐಜಿ ಅಲೋಕ್‌ ಮಿತ್ತಲ್‌ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೆಹಲಿ ಮತ್ತು ಉತ್ತರ ಪ್ರದೇಶ 17 ಸ್ಥಳಗಳಲ್ಲಿ ಸ್ಥಳೀಯ ಉಗ್ರ ನಿಗ್ರಹ ದಳ ಸಿಬ್ಬಂದಿ ಸಹಾಯದೊಂದಿಗೆ ದಾಳಿ ನಡೆಸಿದ್ದೇವೆ. ಇನ್ನೂ ಕಾರ್ಯಾಚರಣೆ ಮುಂದುವರಿದಿದೆ. ಈಗ ಸಿಕ್ಕಿರುವ ಶಸ್ತ್ರಾಸ್ತ್ರ, ಬಾಂಬ್‌ ತಯಾರಿಕಾ ವಸ್ತುಗಳನ್ನು ನೋಡಿದರೆ, ಅವರು ಭಾರಿ ಸಂಖ್ಯೆಯಲ್ಲೇ ಬಾಂಬ್‌ ತಯಾರಿಕೆಗೆ ಮುಂದಾಗಿದ್ದರು ಎನ್ನುವುದು ಗೋಚರವಾಗುತ್ತದೆ. ಇದೆನ್ನೆಲ್ಲ ಗಮನಿಸಿದರೆ ಅವರು ಭಾರಿ ಅನಾಹುತ ಮಾಡಲು ಸಿದ್ಧತೆ ನಡೆಸಿರುವುದು ಪಕ್ಕಾ ಆಗುತ್ತಿದೆ. 134 ಸಿಮ್‌ ಕಾರ್ಡ್‌, 112 ಅಲಾರಾಂ ಕ್ಲಾಕ್ಸ್‌, 25 ಕೆಜಿ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ,’ ಎಂದು ಮಾಹಿತಿ ನೀಡಿದರು.
‘ಶಂಕಿತ ಉಗ್ರರು ರಿಮೋಟ್‌ ಕಂಟ್ರೋಲ್‌ ಬಾಂಬ್‌ ತಯಾರಿಸುತ್ತಿದ್ದರು. ಅಲಾರಾಂ ಗಡಿಯಾರಗಳನ್ನು ಬಾಂಬ್‌ ಡಿಟೋನೆಟ್‌ ಮಾಡಲು ಬಳಸಲಾಗುತ್ತದೆ. ಜತೆಗೆ ಫಿದಾಯಿನ್‌ ರೀತಿ ದಾಳಿಗೆ ಸಂಚು ರೂಪಿಸುತ್ತಿದ್ದರು. ಫೋನ್ ಗಳನ್ನು ಬಾಂಬ್‌ ದಾಳಿ ಮಾಡಲು ಇಲ್ಲವೇ ಸಂವಹನಕ್ಕಾಗಿ ಬಳಸಿಕೊಳ್ಳಲು ಯೋಜಿಸಿರುವ ಸಾಧ್ಯತೆಗಳಿವೆ. ತಂಡದ ಮುಖ್ಯಸ್ಥನ ಬಳಿ ರಾಕೆಟ್‌ ಲಾಂಚರ್‌ ಕೂಡ ಇತ್ತು. ಜತೆಗೆ 13 ಪಿಸ್ತೂಲ್ ಗಳಿದ್ದವು,’ಎಂದು ಮಿತ್ತಲ್‌ ಅವರು ತಿಳಿಸಿದರು.
ಇನ್ನು ಇದೊಂದು ಸ್ವ-ಹಣಕಾಸು ಕಾರ್ಯಾಚರಣೆ ಹೊಂದಿದ ಗುಂಪಾಗಿದೆ. ಆದರೆ, ಇದರ ಪ್ರಮುಖ ಸೂತ್ರಧಾರ ವಿದೇಶದಲ್ಲಿ ನೆಲೆಸಿರುವ ಸಾಧ್ಯತೆ ಇದೆ. ಸ್ಥಳೀಯವಾಗಿ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿರುವ ಮುಫ್ತಿ ಸುಹೈಲ್‌ ನೇತೃತ್ವ ವಹಿಸಿದ್ದಾನೆ ಎಂಬುದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಪ್ರಮುಖ ರಾಜಕಾರಣಿಗಳು, ಇತರ ಗಣ್ಯ ವ್ಯಕ್ತಿಗಳು ಮತ್ತು ಭದ್ರತಾ ಸಂಸ್ಥೆಗಳು ಶಂಕಿತ ಉಗ್ರರ ಟಾರ್ಗೆಟ್ ಆಗಿದ್ದು, ಐಸಿಸ್‌ ಪ್ರೇರಿತ ಶಂಕಿತ ಉಗ್ರರು, ಐಸೀಸ್‌ ರೀತಿಯಲ್ಲಿ ವಿಧ್ವಂಸಕ ಕಾರ್ಯಾಚರಣೆ ಕೈಗೊಳ್ಳಲು ಸಂಚು ರೂಪಿಸುತ್ತಿದ್ದರು. ಅವರು ತಮ್ಮ ಈ ತಂಡವನ್ನು ‘ಹರ್ಕತ್‌ ಉಲ್‌ ಹರ್ಬ್‌ ಇಸ್ಲಾಮ್‌’ ಎಂದು ಕರೆದುಕೊಳ್ಳುತ್ತಿದ್ದರು. ಆದರೆ, ಇದರ ನಿಜವಾದ ಮುಖ್ಯಸ್ಥ ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಉತ್ತರ ಪ್ರದೇಶದ ಅಮ್ರೋಹಾ ಮಸೀದಿಯಲ್ಲಿ ಮೌಲ್ವಿಯಾಗಿರುವ ದೆಹಲಿ ನಿವಾಸಿ ಮುಫ್ತಿ ಸುಹೈಲ್‌ ಈ ಸಂಘಟನೆಯ ಮುಖ್ಯಸ್ಥನಾಗಿದ್ದು, ಈ ತಂಡಕ್ಕೆ ಮಾರ್ಗದರ್ಶಿಯಾಗಿರುವ ಹ್ಯಾಂಡ್ಲರ್‌ ವಿದೇಶಿದಲ್ಲಿರುವ ಸಾಧ್ಯತೆ ಇದೆ.

About the author

ಕನ್ನಡ ಟುಡೆ

Leave a Comment