ರಾಷ್ಟ್ರ ಸುದ್ದಿ

ದೇಶದ್ರೋಹಿ ಉಗ್ರನಾಗಿದ್ದವ ಸೈನ್ಯ ಸೇರಿ ದೇಶಕ್ಕಾಗಿ ಹುತಾತ್ಮನಾದ

ಶ್ರೀನಗರ: ಇಲ್ಲಿಯರೆಗೆ ನೀವು ವಿಧ್ವಂಸಕ ಕೃತ್ಯ ನಡೆಸುತ್ತ ದೇಶಕ್ಕೆ ಆತಂಕ ತಂದೊಡ್ಡುವ ಭಯೋತ್ಪಾದಕರ ಬಗ್ಗೆ ಕೇಳಿರುತ್ತೀರ. ಆದರೆ ಇದೊಂದು ಅಪರೂಪದಲ್ಲಿ ಅಪರೂಪದ ಕಥೆ. ದೇಶದ್ರೋಹಿ ಉಗ್ರನಾಗಿದ್ದವ ಮನಃ ಪರಿವರ್ತನೆಗೊಂಡು ಸೈನ್ಯ ಸೇರಿ ಉಗ್ರರ ವಿರುದ್ಧ ಹೋರಾಡುತ್ತ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾನೆ. ಈ ಮೂಲಕ ತಾಯ್ನೆಲದ ಋಣ ತೀರಿಸಿದ್ದಾನೆ. ಆತನೇ ಲ್ಯಾನ್ಸ್ ನಾಯಕ್  ವಾನಿ

ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಭಾತೀಯ ಸೈನ್ಯ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 6 ಉಗ್ರರನ್ನು ಸದೆಬಡಿದಿತ್ತು. ಈ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ವಾನಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಾನಿ ಈ ಹಿಂದೆ ಉಗ್ರನಾಗಿದ್ದ. ಆದರೆ ತಾನು ಮಾಡುತ್ತಿರುವುದು ತಪ್ಪು, ಹಿಂಸೆಯ ಮಾರ್ಗ ಸರಿಯಲ್ಲವೆಂದು ಅರಿವಾದ ಮೇಲೆ ಶರಣಾಗತನಾಗಿ ಸೈನ್ಯ ಸೇರಿದ್ದ. ಆತನ ಮೇಲೆ ಸೈನ್ಯಾಧಿಕಾರಿಗಳು ಇಟ್ಟಿದ್ದ ನಂಬಿಕೆಯನ್ನಾತ ಕಳೆದುಕೊಳ್ಳಲಿಲ್ಲ. ನಿಜವಾದ ದೇಶಪ್ರೇಮಿಯಾಗಿ ಬದಲಾದ ಆತ ಕೊನೆಗೆ ಅದೇ ಉಗ್ರರ ವಿರುದ್ಧ ಹೋರಾಡುತ್ತ ದೇಶಕ್ಕಾಗಿ ಸರ್ವೋಚ್ಚ ಬಲಿದಾನ ನೀಡಿದ.

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಚೆಕಿ ಅಸ್ಮುಜಿ ಗ್ರಾಮದವನಾಗಿದ್ದ ವಾನಿ 2004 ರಲ್ಲಿ ಪ್ರಾದೇಶಿಕ ಸೈನ್ಯದ 162 ಬೆಟಾಲಿಯನ್ ಸೇರಿದ್ದ. ಕುಲ್ಗಾಮ್ ಜಿಲ್ಲೆ  ಭಯೋತ್ಪಾದಕ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ. ಕರ್ತವ್ಯನಿಷ್ಠನಾಗಿದ್ದ ವಾನಿಗೆ 2007ರಲ್ಲಿ ಶೌರ್ಯ ಪ್ರಶಸ್ತಿ ಲಭಿಸಿತ್ತು.

ಮತ್ತೀಗ ಆತ ಹುತಾತ್ಮನಾಗಿದ್ದು ತ್ರಿವರ್ಣ ಧ್ವಜದಲ್ಲಿ ಸುತ್ತಲ್ಪಟ್ಟ ಯೋಧನ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತಂದು 21 ಸುತ್ತು ಗುಂಡು ಹಾರಿಸಿ ಸಕಲ ಸೇನಾ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಲ್ಯಾನ್ಸ್ ನಾಯಕ್ ವಾನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ವಾನಿ (38) ಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ, ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment