ರಾಷ್ಟ್ರ ಸುದ್ದಿ

ದೇಶದ ಆರ್ಥಿಕತೆ ದ್ವಿಗುಣಗೊಳಿಸಲು ಮೋದಿ ರೂಪಿಸುತ್ತಿದ್ದಾರೆ ಮಾಸ್ಟರ್ ಪ್ಲ್ಯಾನ್

ನವದೆಹಲಿ: ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದನ್ನು ತಮ್ಮ ಆಡಳಿತದ ಅಗ್ರ ಕಾರ್ಯಸೂಚಿಯಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ಆರ್ಥಿಕತೆಯನ್ನು ದ್ವಿಗುಣಗೊಳಿಸುವ ಅಂದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ ಹೊಂದಿದ್ದಾರೆ.
ಆರ್ಥಿಕತೆಯನ್ನು ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮುಖ್ಯವಾಗಿ ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳಗೊಳಿಸಿ ವಿಶ್ವದ ಟಾಪ್ 50 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ಇರುವಂತೆ ಮಾಡಲು ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳೀಕರಣದ ಕುರಿತಾದ ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ,  ಸುಧಾರಣಾ ನೀತಿಗಳಿಗೆ ಎದುರಾಗಿದ್ದ ಅಡೆತಡೆಗಳನ್ನು ತಮ್ಮ ಸರ್ಕಾರ ನಿವಾರಿಸಿದ್ದು ನೀತಿ ಕೇಂದ್ರಿತ ಆಡಳಿತ ನೀಡುತ್ತಿದೆ. ಈ ಪರಿಣಾಮವಾಗಿ ಭಾರತ ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳಗೊಳಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ 142 ನೇ ಸ್ಥಾನದಿಂದ 77 ನೇ ಸ್ಥಾನಕ್ಕೆ ಸುಧಾರಣೆ ಕಂಡಿದೆ ಎಂದಿದ್ದಾರೆ. ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಮತ್ತಷ್ಟು ಕೈಗೊಂಡು ದೇಶದಲ್ಲಿ ಉದ್ಯಮ ಸ್ಥಾಪಿಸಲು ಮುಂದಾಗುವ ಸಂಸ್ಥೆಗಳಿಗೆ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳೀಕರಣಗೊಳಿಸುವುದಾಗಿ ಮೋದಿ ಇದೇ ವೇಳೆ ಭರವಸೆ ನೀಡಿದ್ದು, ಭಾರತವನ್ನು 5 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯನ್ನಾಗಿ ಮಾಡುವ ಗುರಿಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಭಾರತ ನಿರಂತರ ಸುಧಾರಣಾ ಕ್ರಮಗಳಿಗೆ ತೆರೆದುಕೊಳ್ಳುತ್ತಿರುವುದರಿಂದಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ವಿಶ್ವಾಸ ಗಳಿಸುತ್ತಿದ್ದು, ಐಎಂಎಫ್, ವಿಶ್ವ ಆರ್ಥಿಕ ವೇದಿಕೆ, ಯುಎನ್ ಸಿಟಿಎಡಿಗಳಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದೆ, ಈ ಎಲ್ಲಾ ಸಂಸ್ಥೆಗಳೂ ಭಾರತದ ಬಗ್ಗೆ ವಿಶ್ವಾಸ ಹೊಂದಿದ್ದು, ಶೀಘ್ರವೇ ಭಾರತವನ್ನು 5 ಟ್ರಿಲಿಯನ್ ಡಾಲರ್ ಕ್ಲಬ್ ರಾಷ್ಟ್ರಗಳಿಗೆ ಸೇರಿಸಲಿದ್ದೇವೆ, ಇದನ್ನು ಸಾಧಿಸಬೇಕಾದರೆ ಆರ್ಥಿಕತೆಯ ಪ್ರತಿ ಕ್ಷೇತ್ರವನ್ನೂ ಸುಧಾರಣೆಯಾಗುವಂತೆ ಮಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment