ರಾಷ್ಟ್ರ ಸುದ್ದಿ

ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ತಲುಪಲಿದೆ: ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ವಿಶ್ವಾಸ

ಮುಂಬೈ: 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ವಿದೇಶಗಳಿಂದ ಕಪ್ಪುಹಣವನ್ನು ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ರೂ.ಗಳನ್ನು ಹಾಕಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು ಎನ್ನಲಾದ ಸಂಗತಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ಅವರೇ ಅದಕ್ಕೆ ಪುಷ್ಟಿ ನೀಡಿದ್ದಾರೆ.

ಹೌದು, ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರತಿಯೊಬ್ಬರ ಖಾತೆಗೂ 15 ಲಕ್ಷ ನಿಧಾನವಾಗಿ ಬಂದು ಬೀಳುತ್ತದೆ. ಆದರೆ, ಒಮ್ಮಿಂದೊಮ್ಮೆಲೆ ಆಗುವುದಿಲ್ಲ. ಇದಕ್ಕಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನವರನ್ನು ಹಣಕ್ಕಾಗಿ ಕೇಳಲಾಗಿತ್ತು. ಆದರೆ, ಅವರು ನೀಡಿಲ್ಲ. ಹಾಗಾಗಿ ಇನ್ನು ಹಣ ಸಂಗ್ರಹವಾಗಿಲ್ಲ. ಒಂದು ಭರವಸೆಯೇನೋ ನೀಡಲಾಗಿತ್ತು. ಆದರೆ, ಕೆಲ ತಾಂತ್ರಿಕ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಗಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದ ಪ್ರಧಾನಿ ಮೋದಿ, ವಿದೇಶದ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಮರಳಿ ದೇಶಕ್ಕೆ ತಂದರೆ ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೂ 15 ಲಕ್ಷ ರೂ. ಗಳನ್ನು ತುಂಬಬಹುದು. ತಾವು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕಪ್ಪು ಹಣವನ್ನು ಮರಳಿ ತರುವ ಬಗ್ಗೆ ಭರವಸೆ ನೀಡಿದ್ದರು. ಇದೇ ವಿಚಾರಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಆಡಳಿತ ಪಕ್ಷ ಬಿಜೆಪಿ ಮಾತಿಗೆ ತಪ್ಪಿದೆ ಎಂದು ಟೀಕಿಸಿತ್ತು.

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅಠಾವಳೆ, ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಕೈತಪ್ಪಿದ್ದಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಕೆಲ ಕ್ಷೇತ್ರಗಳಲ್ಲಷ್ಟೇ ಗೆದ್ದಿದೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಸೋಲಿಸುತ್ತೇವೆ. ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗುತ್ತಾರೆ ಎಂದಿದ್ದರು.

About the author

ಕನ್ನಡ ಟುಡೆ

Leave a Comment