ರಾಜ್ಯ ಸುದ್ದಿ

ದೇಶದ ಭವಿಷ್ಯಕ್ಕೆ ಮಹತ್ವದ ತಿರುವು ನೀಡಿದ ಮೋದಿ: ಎಸ್‌.ಎಂ ಕೃಷ್ಣ ಮನದಾಳದ ಮಾತು

ಬೆಂಗಳೂರು: ತಾವು ಬಹಳ ಯೋಚಿಸಿಯೇ ಬಿಜೆಪಿ ಸೇರುವ ದೃಢ ನಿರ್ಧಾರ ಮಾಡಿದ್ದಾಗಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎಸ್‌ಎಂ ಕೃಷ್ಣ ತಿಳಿಸಿದರು. ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ವರದಿಗಾರರ ಕೂಟ ಆಯೋಜಿಸಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಹಲವು ವಿಚಾರಗಳನ್ನು ತೆರೆದಿಟ್ಟರು. ಅನುವಂಶೀಯ ರಾಜಕೀಯವನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಸೇರುವ ನಿರ್ಧಾರ ಕೈಗೊಂಡೆ. ನಾನು ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಮೂಲ ಕಾರಣ ಎಂದು ಕೃಷ್ಣ ತಿಳಿಸಿದರು.

ಬಿಜೆಪಿಯಲ್ಲಿ ಅರ್ಹತೆ ಇದ್ದವರನ್ನೇ ನಾಯಕರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗುಜರಾತ್‌ನಲ್ಲಿ ಯಶಸ್ವಿಯಾಗಿ 3 ಅವಧಿಗೆ ಮುಖ್ಯಮಂತ್ರಿಯಾಗಿ ಮೋದಿಯವರು ದೇಶಕ್ಕೇ ಮಾದರಿಯಾಗುವಂತೆ ಆ ರಾಜ್ಯವನ್ನು ಅಭಿವೃದ್ಧಿಪಡಿಸಿದರು. ನಂತರ ದಿಲ್ಲಿಯ ರಾಜಕಾರಣಕ್ಕೆ ಪ್ರವೇಶಿಸಿ ಪ್ರಧಾನಿಯಾಗಿ ಭಾರತದ ಭವಿಷ್ಯಕ್ಕೆ ಮಹತ್ವದ ತಿರುವು ನೀಡಿದ್ದಾರೆ. ಅವರಿಗೆ ಯಾವುದೇ ಅಧಿಕಾರದ ಆಸೆ ಇರಲಿಲ್ಲ. ಅವರ ಆ ಗುಣವನ್ನೇ ನಾನು ಮೆಚ್ಚಿಕೊಂಡು ಅನುಸರಿಸಿದೆ. ಮತ್ತೆ ಮೋದಿಯವರೇ ಈ ದೇಶದ ನಾಯಕತ್ವವನ್ನು ಮುಂದುವರಿಸಬೇಕು ಎಂಬುದು ನನ್ನ ಬಯಕೆ’ ಎಂದು ಎಸ್‌.ಎಂ ಕೃಷ್ಣ ಮನದಾಳವನ್ನು ತೆರೆದಿಟ್ಟರು.

ದೇಶ ಕವಲು ದಾರಿಯಲ್ಲಿದೆ: ಐದು ವರ್ಷಗಳ ನಿಷ್ಕಳಂಕ ಹಾಗೂ ಅಭಿವೃದ್ಧಿ ಕೇಂದ್ರಿತ ಆಡಳಿತ ನೀಡಿದ ಮೋದಿಯವರು ದೇಶವನ್ನು ಸದ್ಯ ಒಂದು ರಸ್ತೆಗೆ ತಂದು ಬಿಟ್ಟಿದ್ದಾರೆ. ಇದೇ ಹಾದಿಯಲ್ಲಿ ದೇಶ ಮುಂದುವರಿಯಬೇಕು. ದೇಶದಲ್ಲಿ ಆರ್ಥಿಕವಾಗಿ ಬಹಳಷ್ಟು ಅಭಿವೃದ್ಧಿಯಾಗಿದೆ. ಕಳೆದ ಐದು ವರ್ಷದಿಂದ ಸಾಕಷ್ಟು ಬದಲಾವಣೆಯೂ ಆಗಿದೆ. ಇದಕ್ಕೆಲ್ಲ ಕಾರಣ ನರೇಂದ್ರ ಮೋದಿಯವರು. ಹೀಗಾಗಿಯೇ ಇನ್ನೂ 5 ವರ್ಷ ಅವರು ನಮ್ಮ ದೇಶವನ್ನು ಮುನ್ನಡೆಸಬೇಕು ಅನ್ನೋದು ನನ್ನ ಬಯಕೆ ಎಂದು ಕೃಷ್ಣ ತಿಳಿಸಿದರು.

ವಂಶಪಾರಂಪರ್ಯ ರಾಜಕೀಯ ನನಗೆ ಇಷ್ಟ ಆಗಲಿಲ್ಲ. ಅದರಿಂದ ನಾನು ಕಾಂಗ್ರೆಸ್ ಪಕ್ಷ ಬಿಡಬೇಕಾಯ್ತು. ಕಾಂಗ್ರೆಸ್‌ನಲ್ಲಿ ಇತ್ತೀಚಿನ ಬೆಳವಣಿಗೆ ನನಗೆ ಇಷ್ಟವಾಗಲಿಲ್ಲ. ಇದರಿಂದ ನಾನು ಕಾಂಗ್ರೆಸ್‌ನಲ್ಲಿ ಉಳಿದು ಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ 40 ವರ್ಷಗಳ ಕಾಲದ ಸಂಬಂಧವನ್ನು ಮುರಿದು‌ ಬಿಜೆಪಿಗೆ ಬಂದೆ.

ಎಚ್‌ಡಿಕೆಗೆ ಟಾಂಗ್‌ ಕೊಟ್ಟ ಕೃಷ್ಣ: ಹಿಂಬಾಗಿಲಿನಿಂದ ಮುಂಬಾಗಿಲಿನಿಂದ ಬಂದೆ ಅಂತ ಅಲ್ಲ; 1999 ರಲ್ಲಿ ರಾಜ್ಯಾದ್ಯತ ಓಡಾಡಿ, 132 ಶಾಸಕರನ್ನ ಗೆಲ್ಲಿಸಿಕೊಂಡು ಬಂದೆ. ಆ ಇತಿಹಾಸ ನನ್ನ ಹಿಂದೆ ಇದೆ. ಬಿಜೆಪಿ ಜೊತೆ ಸೇರಿಕೊಂಡು ರಾತ್ರೋರಾತ್ರಿ ಸಿಎಂ ಆದರಲ್ಲಾ, ಅದು ಹಿಂಬಾಗಿಲು ಪ್ರವೇಶ ಎಂದು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಕೃಷ್ಣ ತಿರುಗೇಟು ನೀಡಿದರು. ಒಕ್ಕಲಿಗರಾಗಿ ದೇವೇಗೌಡರನ್ನು ಏಕೆ ಬೆಂಬಲಿಸುತ್ತಿಲ್ಲ ಎಂಬ ಪ್ರಶ್ನೆಗೆ ತೀಕ್ಷ್ಣ ಉತ್ತರಕೊಟ್ಟ ಎಸ್ಎಂಕೆ, ಇದು ಒಕ್ಕಲಿಗರ ಸಂಘದ ಚುನಾವಣೆಯಲ್ಲ. ಇದು ದೇಶದ ಚುನಾವಣೆ. ದೇಶ ಮೊದಲು, ಉಳಿದದ್ದು ಸೆಕೆಂಡರಿ. ದೇವೇಗೌಡರನ್ನು ಬೆಂಬಲಿಸಿಲ್ಲ ಎಂಬುದರಲ್ಲಿ ಯಾವುದೇ ವಿಪರ್ಯಾಸ ಅನಿಸುತ್ತಿಲ್ಲ ಎಂದು ಖಡಕ್ ಉತ್ತರ ನೀಡಿದರು. ನಾನು ಸಮ್ಮಿಶ್ರ ಸರ್ಕಾರದ ವಿರೋಧಿ. ಕಾಂಗ್ರೆಸ್ ವಿರೋಧಿ, ಜೆಡಿಎಸ್ ವಿರೋಧಿ. ಹಾಗಾಗಿ ಮಂಡ್ಯದಲ್ಲಿ ನಾನು ಯಾವ ನಿಲುವು ತೆಗೆದುಕೊಳ್ಳಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು ಎಂದು ಕೃಷ್ಣ ಸ್ಪಷ್ಟಪಡಿಸಿದರು.

ಬೆಂಗಳೂರು ಅಭಿವೃದ್ಧಿ ಕುರಿತು: ಬೆಂಗಳೂರು ಅಭಿವೃದ್ದಿಯ ಬಗ್ಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ನನ್ನ ಅವಧಿಯಲ್ಲಿ ಪ್ರಾರಂಭವಾದ ಯೋಜನೆಗಳು ಅದೇ ವೇಗದಲ್ಲಿ ಮುಂದುವರಿದಿದ್ದರೆ ಬೆಂಗಳೂರು ಮತ್ತಷ್ಟು ಅಭಿವೃದ್ದಿಯಾಗುತ್ತಿತ್ತು. ಆದರೆ ನನ್ನ ನಂತರ ಅಧಿಕಾರಕ್ಕೆ ಬಂದವರಿಗೆ ಅದು ಬೇಕಾಗಿರಲಿಲ್ಲ‌’ ಎಂದು ಕೃಷ್ಣ ವಿಷಾದ ವ್ಯಕ್ತಪಡಿಸಿದರು. ನಾನು ಬಿಜೆಪಿ ಸೇರಿದ ನಂತರ ನನ್ನ ಅಳಿಯ ಸಿದ್ದಾರ್ಥ ಮೇಲೆ ಐಟಿ ದಾಳಿ ಆಯ್ತು. ಇದು ನನಗೆ ಬಿಜೆಪಿ ಕೊಟ್ಟ ಬಳುವಳಿ. ಆದರೆ ಐಟಿ ದಾಳಿಗೂ ರಾಜಕಾರಣಕ್ಕೂ ಸಂಬಂಧ ಬೆರೆಸುವುದು ಸೂಕ್ತವಲ್ಲ’ ಎಂದು ಅವರು ಪ್ರತಿಪಾದಿಸಿದರು.

About the author

ಕನ್ನಡ ಟುಡೆ

Leave a Comment