ರಾಜ್ಯ ಸುದ್ದಿ

ದೇಶದ 130 ಕೋಟಿ ಜನ ಒಪ್ಪಿದರೆ 370ನೇ ವಿಧಿ ರದ್ದು ಮಾಡಲಿ: ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ

ಹಾಸನ: ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸಿದ್ದು ನಾವಲ್ಲ; ಅದು ಮೊದಲಿನಿಂದಲೂ ಇದೆ. ಈಗ ಬದಲಾವಣೆ ಬೇಕು ಎಂದು ‌ಏಕೆ ಎನಿಸುತ್ತಿದೆ? ಇದನ್ನು ನಾನು ಒಪ್ಪುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಯಲಿಯೂರಿನಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಗೌಡರು ಸುದ್ದಿಗಾರರ ಜತೆ ಮಾತನಾಡುತ್ತ ಈ ಹೇಳಿಕೆ ನೀಡಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ವಿಧಿ ರದ್ದು ಮಾಡಿದರೆ ಪ್ರತ್ಯೇಕ ಪ್ರಧಾನಿ ಬೇಕು ಎಂಬ ಓಮರ್ ಅಬ್ದುಲ್ಲಾ ಹೇಳಿಕೆ ಕುರಿತು ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ ಗೌಡರು ಈ ಹೇಳಿಕೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರೇ ನಿನ್ನೆ ಚುನಾವಣೆ ಪ್ರಚಾರದ ವೇಳೆ, ನ್ಯಾಷನಲ್ ಕಾನ್ಫರೆನ್ಸ್‌ ಮುಖಂಡರ ಬೇಡಿಕೆ ಕುರಿತು ಕಾಂಗ್ರೆಸ್ ಮತ್ತು ಘಟಬಂಧನದ ಪಕ್ಷಗಳು ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌಡರು, ಮೋದಿ ಅವರಿಗೆ ಇಡೀ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪರಿಕಲ್ಪನೆ ಇದೆ. ಹಿಂದೆ ರಾಜರುಗಳು, ಮತ್ತು ಎಲ್ಲಾ ವರ್ಗದ ಜನರ ಅಭಿಪ್ರಾಯ ಪಡೆದೇ ಈ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಅಲ್ಲಿ ಮುಸ್ಲಿಂ, ಪಂಡಿತರು ಕ್ರಿಶ್ಚಿಯನ್ ಸೇರಿ ಎಲ್ಲಾ ವರ್ಗದವರೂ ವಾಸದ್ದಾರೆ. 370 ವಿಧಿ ತೆಗೆದರೆ ನಮ್ಮದೇನೂ ಅಭ್ಯಂತರವಿಲ್ಲ. ದೇಶದ 130 ಕೋಟಿ ಜನರು ಒಪ್ಪಿದರೆ ರದ್ದು ಮಾಡಲಿ ಎಂದು ವಾಗ್ದಾಳಿ ನಡೆಸಿದರು. ನಾನು ಪ್ರಧಾನಿಯಾಗಿದ್ದಾಗ ಎಲ್ಲರೂ ಸಹಬಾಳ್ವೆಯಿಂದ ಇದ್ದರು. ನಾನೇನೂ ಮುಸ್ಲಿಮ್ ಅಲ್ಲ, ನಾನು ಹಿಂದೂನೇ ಎಂದು ಗೌಡರು ಕುಟುಕಿದರು.

About the author

ಕನ್ನಡ ಟುಡೆ

Leave a Comment