ರಾಷ್ಟ್ರ ಸುದ್ದಿ

ದೇಶವನ್ನು ಮುನ್ನಡೆಸುವ ತಾಕತ್ತು ಇರುವುದು ನರೇಂದ್ರ ಮೋದಿಯವರಿಗೆ ಮಾತ್ರ; ಕೆ ಪಳನಿಸ್ವಾಮಿ

ಚೆನ್ನೈ: ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿಂದ ತಮಿಳು ನಾಡಿನ ಚೆನ್ನೈಗೆ ಹೋದರು. ನಿನ್ನೆ ತಮಿಳುನಾಡಿನ ಪ್ರಚಾರ ಸಭೆಯಲ್ಲಿ ಎಐಎಡಿಎಂಕೆ ಮತ್ತು ಪಿಎಂಕೆ ಜೊತೆ ಬಿಜೆಪಿ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿದೆ. ಸಭೆಯಲ್ಲಿ ಪ್ರಧಾನಿ ಮಾಜಿ ಮುಖ್ಯಮಂತ್ರಿಗಳಾದ ಎಂಜಿ ರಾಮಚಂದ್ರನ್, ಜೆ ಜಯಲಲಿತಾ ಮತ್ತು ಕಾಂಗ್ರೆಸ್ ನಾಯಕ ಕೆ ಕಾಮರಾಜ ಅವರನ್ನು ಸಹ ಹೊಗಳಿದರು. ತಮಿಳುನಾಡಿನ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಎನ್ ಡಿಎ ಅಧಿಕಾರಕ್ಕೆ ಬಂದರೆ ಎಂಜಿ ರಾಮಚಂದ್ರನ್ ಅವರ ಹೆಸರಿಡುವುದಾಗಿ ಹೇಳಿದರು. ತಮ್ಮ ಭಾಷಣದುದ್ದಕ್ಕೂ ತಮಿಳಿಗರನ್ನು ಸಂತೋಷಿಸಲು ಯತ್ನಿಸಿದ ಪ್ರಧಾನಿ ತಮ್ಮ ಸರ್ಕಾರ ರಾಜ್ಯ ಮೂಲದ ವಿಮಾನಗಳಲ್ಲಿ ತಮಿಳಿನಲ್ಲಿ ಘೋಷಣೆ ತರುವುದನ್ನು ಪರಿಗಣಿಸುವುದಾಗಿ ಹೇಳಿದರು. ನಿನ್ನೆ ಪ್ರಧಾನಿಯವರ ಭೇಟಿಗೆ ಸಹಜವಾಗಿಯೇ ವಿರೋಧ ಪಕ್ಷಗಳಿಂದ ಟೀಕೆಗಳು ವ್ಯಕ್ತವಾಗಿದ್ದವು. ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಕನಸಿನಂತೆ ತಮಿಳು ನಾಡನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರ ಸತತ ಪ್ರಯತ್ನ ಮುಂದುವರಿಸುತ್ತಿದೆ ಎಂದರು. ಎಂಜಿಆರ್ ಅವರು ಭಾರತದ ಒಬ್ಬ ಅತ್ಯಂತ ಗೌರವಾನ್ವಿತ ವ್ಯಕ್ತಿ. ಅವರು ಚಿತ್ರರಂಗ ಮತ್ತು ಜನರ ಹೃದಯವನ್ನು ಗೆದ್ದವರು. ಸಮಾಜದ ಕೆಳವರ್ಗದವರ ಉದ್ಧಾರಕ್ಕಾಗಿ ಸತತ ದುಡಿಯುತ್ತಿದ್ದರು. ಅವರ ಸಾಮಾಜಿಕ ಅಭಿವೃದ್ಧಿ ಕೆಲಸಗಳಿಂದ ತಮಿಳುನಾಡಿನ ಬಹಳ ಸಹಾಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾತನಾಡಿ, ದೇಶದ ಭದ್ರತೆ ಇಂದು ಮುಖ್ಯವಾಗಿದೆ, ನರೇಂದ್ರ ಮೋದಿಯವರು ಮಾತ್ರ ಈ ದೇಶವನ್ನು ಮುನ್ನಡೆಸಲು ಅರ್ಹತೆ ಹೊಂದಿರುವವರು. ಹೀಗಾಗಿ ನಾವು ಮತ್ತು ನಮ್ಮ ಮೈತ್ರಿಪಕ್ಷ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ ನೆರೆ ರಾಷ್ಟ್ರ ನಮಗೆ ಎಲ್ಲಾ ರೀತಿಯ ಸಮಸ್ಯೆ ತಂದೊಡ್ಡುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಮ್ಮಲ್ಲಿ ಗಟ್ಟಿಯಾದ, ದಕ್ಷ ನಾಯಕತ್ವ ಬೇಕಾಗಿದೆ ಎಂದು ಪಳನಿಸ್ವಾಮಿ ಹೇಳಿದರು. ಜಯಲಲಿತಾ ಅವರು ಇಂದು ಇರುತ್ತಿದ್ದರೆ ಬಿಜೆಪಿ ಜೊತೆ ಖಂಡಿತಾ ಕೈಜೋಡಿಸುತ್ತಿದ್ದರು ಎಂದು ಒ ಪನ್ನೀರ್ ಸೆಲ್ವಂ ಅಭಿಪ್ರಾಯಪಟ್ಟರು.

About the author

ಕನ್ನಡ ಟುಡೆ

Leave a Comment